ʼಕೈʼ ಕೊಟ್ಟು ʼಕಮಲʼ ಮುಡಿಯುತ್ತಾರಾ ಕಮಲ್ ನಾಥ್?
ಹೊಸದಿಲ್ಲಿ/ಭೋಪಾಲ್: ಪಕ್ಷದ ನಿರ್ಧಾರಗಳಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿ.ಡಿ.ಶರ್ಮ ಪ್ರತಿಪಾದಿಸಿದ ಬೆನ್ನಿಗೇ, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ತಮ್ಮ ಸಾಮಾಜಿಕ ಮಾಧ್ಯಮಗಳ ಸ್ವವಿವರದಿಂದ ಕಾಂಗ್ರೆಸ್ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ndtv ವರದಿ ಮಾಡಿದೆ.
ನಕುಲ್ ನಾಥ್‌ರ ಈ ನಡೆಯಿಂದ ಕಳೆದ ಕೆಲವು ದಿನಗಳಿಂದ ಕಮಲ್ ನಾಥ್ ಬಿಜೆಪಿಗೆ ಪಕ್ಷಾಂತರ ಮಾಡುತ್ತಾರೆ ಎಂಬ ವದಂತಿಗಳಿಗೆ ತುಪ್ಪ ಸುರಿದಂತಾಗಿದೆ.
ಈ ನಡುವೆ, ದಿಲ್ಲಿಗೆ ತೆರಳಿರುವ ಕಮಲ್ ನಾಥ್, ಇಂದು ಸಂಜೆ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಕಮಲ್ ನಾಥ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆಯೊ ಅಥವಾ ಕಾಂಗ್ರೆಸ್ ತೊರೆಯುವುದರಿಂದ ಹಿಂದೆ ಸರಿಯಲಿದ್ದಾರೆಯೊ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಿದ್ದೂ, ನಕುಲ್ ನಾಥ್ ಬಿಜೆಪಿ ಅಭ್ಯರ್ಥಿಯಾಗಿ ಚಿಂಚ್ವಾಡಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದ್ದು, ಅವರ ಪಕ್ಷ ಸೇರ್ಪಡೆಗೆ ಅನುಗುಣವಾಗಿ ಕ್ರಮಗಳನ್ನು ಯೋಜಿಸಲಾಗುತ್ತಿದೆ.
ನಾನೇನಾದರೂ ಪಕ್ಷ ತೊರೆಯುವುದಿದ್ದರೆ ಆ ಕುರಿತು ಮೊದಲು ಮಾಧ್ಯಮಗಳಿಗೇ ಮಾಹಿತಿ ನೀಡುತ್ತೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ತಿಳಿಸಿದ್ದಾರೆ.