ಕಾಸರಗೋಡು | ದೇವಾಲಯದ ಉತ್ಸವದಲ್ಲಿ ಪಟಾಕಿ ಅವಘಡ : SIT ತನಿಖೆ ಘೋಷಿಸಿದ ಕೇರಳ ಸರಕಾರ
ಕಾಸರಗೋಡು : ನೀಲೇಶ್ವರಂನ ಅಂಜುತಂಬಲಂ ವೀರನ್ ಕಾವು ದೇವಸ್ಥಾನದಲ್ಲಿ ಸೋಮವಾರ ರಾತ್ರಿ ನಡೆದ ಪಟಾಕಿ ಅವಘಡಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ(SIT)ವನ್ನು ರಚಿಸಲಾಗಿದೆ ಎಂದು ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥೆ ಡಿ.ಶಿಲ್ಪಾ ತಿಳಿಸಿದ್ದಾರೆ.
ವಾರ್ಷಿಕ ಕಲಿಯಾಟಂ ಉತ್ಸವ ನಡೆಸುವಾಗ, ದೇವಾಲಯದ ಆವರಣದೊಳಗಿದ್ದ ಪಟಾಕಿಗಳು ಸ್ಫೋಟಗೊಂಡು ಗಂಭೀರವಾಗಿ ಎಂಟು ಮಂದಿ ಸೇರಿದಂತೆ ಒಟ್ಟು 154 ಮಂದಿ ಗಾಯಗೊಂಡಿದ್ದರು. ಸೋಮವಾರ ಮಧ್ಯರಾತ್ರಿ 12:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ನೀಲೇಶ್ವರಂನ ಅಂಜುತಂಬಲಂ ವೀರನ್ ಕಾವು ದೇವಸ್ಥಾನದಲ್ಲಿ ಕಳೆದ ರಾತ್ರಿ ವಾರ್ಷಿಕ ಕಲಿಯಾಟಂ ಉತ್ಸವ ನಡೆಯುತ್ತಿತ್ತು. ಈ ವೇಳೆ ಪಟಾಕಿ ಸಿಡಿಸಲಾಗಿದೆ. ಈ ಸಂದರ್ಭದಲ್ಲಿ ಪಟಾಕಿಯ ಕಿಡಿ ದೇವಸ್ಥಾನದ ಬಳಿಯೇ ಇದ್ದ ಪಟಾಕಿ ಸಂಗ್ರಹಾಗಾರಕ್ಕೆ ತಗುಲಿ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಘಟನೆಯ ಕುರಿತು ಪ್ರತ್ಯೇಕ ವಿಚಾರಣೆ ನಡೆಸಿ, ವರದಿಯೊಂದನ್ನು ಸಲ್ಲಿಸುವಂತೆ ಹೆಚ್ಚುವರಿ ವಿಭಾಗಾಧಿಕಾರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ದೇವಸ್ಥಾನ ಆಡಳಿತ ಸಮಿತಿಯ ನಿರ್ಲಕ್ಷ್ಯವೇ ಅವಘಟಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ದೇವಸ್ಥಾನಕ್ಕೆ ಸಂಬಂಧಪಟ್ಟವರು ಪಟಾಕಿ ಸಿಡಿಸಲು ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಸಂಬಂಧ ನೀಲೇಶ್ವರಂ ಪೊಲೀಸರು ಸ್ಫೋಟಕ ಸಾಮಗ್ರಿಗಳ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪಟಾಕಿ ಅಪಘಾತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.