ಕಾಲು ಜಾರಿ ಬಿದ್ದ ಕೆಸಿಆರ್: ಆಸ್ಪತ್ರೆಗೆ ದಾಖಲು
ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕಾಲು ಜಾರಿ ಬಿದ್ದಿದ್ದು, ಅವರನ್ನು ಇಂದು ಮುಂಜಾನೆ 2 ಗಂಟೆ ವೇಳೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ndtv.com ವರದಿ ಮಾಡಿದೆ.
ಕಾಲು ಜಾರಿ ಬಿದ್ದಿರುವುದರಿಂದ ಮಂಡಿಯ ಮೂಳೆ ಮುರಿದಿರುವ ಸಾಧ್ಯತೆ ಇದ್ದು, 69 ವರ್ಷದ ಕೆ.ಚಂದ್ರಶೇಖರ್ ರಾವ್ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಅವರನ್ನು ಶುಕ್ರವಾರ ಮುಂಜಾನೆ 2 ಗಂಟೆ ಸಮಯದಲ್ಲಿ ಹೈದರಾಬಾದ್ ನ ಯಶೋಧಾ ಆಸ್ಪತ್ರೆಗೆ ಸಾಗಿಸಲಾಯಿತು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಮ್ಮ ನಿವಾಸದಲ್ಲಿ ಕಳೆದ ಮೂರು ದಿನಗಳಿಂದ ಜನರನ್ನು ಭೇಟಿ ಮಾಡುತ್ತಿದ್ದಾರೆ.
ಕೆ.ಚಂದ್ರಶೇಖರ್ ರಾವ್ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ. “ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆಸಿಆರ್ ಅವರಿಗೆ ಗಾಯವಾಗಿದೆ ಎಂದು ತಿಳಿದು ಬೇಸರವಾಯಿತು. ನಾನು ಅವರ ಶೀಘ್ರ ಚೇತರಿಕೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.