ಕೇರಳ | ಎರಡನೇ ಎಂಪಾಕ್ಸ್ ಪ್ರಕರಣ ಬೆಳಕಿಗೆ
ತಿರುವನಂತಪುರ :ಯುಎಇ ಯಿಂದ ಹಿಂದಿರುಗಿ ಎರ್ನಾಕುಳಂನಲ್ಲಿ ನೆಲೆಸಿರುವ 26 ವರ್ಷದ ಯುವಕನಲ್ಲಿ ಎಂಪಾಕ್ಸ್ ಸೋಂಕು ಇರುವುದನ್ನು ಆರೋಗ್ಯ ಇಲಾಖೆ ಶುಕ್ರವಾರ ದೃಢಪಡಿಸಿದೆ.
ಆತ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಮಾದರಿಯನ್ನು ಆಲಪ್ಪುಳದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಆತನ ಮಾದರಿಯನ್ನು ಜೆನೋಮಿಕ್ ಸೀಕ್ವಿನ್ಸಿಂಗ್‌ಗಾಗಿ ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿ ಕೊಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಇದು ಈ ವರ್ಷ ರಾಜ್ಯದಲ್ಲಿ 2ನೇ ಹಾಗೂ ದೇಶದಲ್ಲಿ ಮೂರನೇ ಎಂಪಾಕ್ಸ್ ಪ್ರಕರಣ ಎಂದು ಅದು ತಿಳಿಸಿದೆ.
ಈ ಹಿಂದೆ ಮಲಪ್ಪುರಂನ ಎಡವಣ್ಣದ 38 ವರ್ಷದ ವ್ಯಕ್ತಿಗೆ ಸೋಂಕು ತಗಲಿರುವುದು ಸೆಪ್ಟಂಬರ್ 18ರಂದು ದೃಢಪಟ್ಟಿತ್ತು. ಅನಂತರ ಇದು ವೈರಸ್‌ನ ಕ್ಲಾಡ್ 1ಬಿ ಪ್ರಭೇದದಿಂದ ಆದ ಸೋಂಕು ಎಂದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಐಸೋಲೇಷನ್ ಸೌಲಭ್ಯಗಳನ್ನು ಆರಂಭಿಸಲಾಗಿದೆ. ಸರ್ವೇಕ್ಷಣೆಯನ್ನು ಸುದೃಢಗೊಳಿಸಲಾಗಿದೆ. ರಾಜ್ಯದಲ್ಲಿ ಎಂಪಾಕ್ಸ್ ಅನ್ನು ತಡೆಯಲು ಹಾಗೂ ಪರಿಣಾಮಕಾರಿ ಚಿಕಿತ್ಸೆಗೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಕೂಡ ಇಲಾಖೆ ಯೋಜಿಸಿದೆ.
ಹಿಂದೆ ಮಂಕಿ ಪಾಕ್ಸ್ ಎಂದು ಕರೆಯಲಾಗುತ್ತಿದ್ದ, ವೈರಸ್‌ನಿಂದ ಉಂಟಾಗುವ ವೈರಸ್ ಅನಾರೋಗ್ಯ ಎಂಪಾಕ್ಸ್. ಇದು ಜೀನಸ್ ಓರ್ಥೋಜೋಕ್ಸ್‌ವೈರಸ್‌ನ ಪ್ರಬೇಧ. ಈ ವೈರಸ್‌ಗಳಲ್ಲಿ ಎರಡು ವಿಭಿನ್ನ ಪ್ರಬೇಧಗಳು ಇವೆ. ಕ್ಲಾಡ್ 1 ಹಾಗೂ ಕ್ಲಾಡ್ 2.