ಅರುಣಾಚಲ ಪ್ರದೇಶ| ಮೃತಪಟ್ಟ ಸ್ಥಿತಿಯಲ್ಲಿ ಕೇರಳ ದಂಪತಿ ಮತ್ತು ಸ್ನೇಹಿತೆ ಪತ್ತೆ: ವಾಮಾಚಾರ ಶಂಕೆ

Update: 2024-04-03 09:00 GMT

Photo : NDTV 

ತಿರುವನಂತಪುರಂ: ವಾಮಾಚಾರ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿರುವ ಕೇರಳ ಮೂಲದ ಮೂವರು ವ್ಯಕ್ತಿಗಳ ಸಾವಿನ ಸಂಬಂಧ ಅರುಣಾಚಲ ಪ್ರದೇಶಕ್ಕೆ ಪೊಲೀಸ್ ತಂಡವೊಂದನ್ನು ಕಳಿಸಲಾಗುತ್ತಿದೆ ಎಂದು ಮಂಗಳವಾರ ಕೇರಳ ಪೊಲೀಸರು ತಿಳಿಸಿದ್ದಾರೆ.

ಆದರೆ, ಈಗಲೇ ಆ ಮೂವರು ಮಾಟ-ಮಂತ್ರದಿಂದ ಮೃತಪಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇರಳ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ವಿವಾಹಿತ ದಂಪತಿಗಳು ಹಾಗೂ ಅವರೊಂದಿಗಿದ್ದ ಮಹಿಳೆಯ ವರ್ತನೆಯು ಅಸಹಜವಾಗಿರುವಂತೆ ಕಂಡು ಬಂದಿದೆ. ಆದರೆ, ಅವರ ಮೊಬೈಲ್ ಗಳು ಹಾಗೂ ಇನ್ನಿತರ ವಿದ್ಯುನ್ಮಾನ ಸಾಧನಗಳನ್ನು ಪರಿಶೀಲಿಸದ ಹೊರತು ಈಗಲೇ ಏನನ್ನೂ ನಿರ್ಣಾಯಕವಾಗಿ ಹೇಳಲು ಸಾಧ್ಯವಿಲ್ಲ ಎಂದು ತಿರುವನಂತಪುರಂ ನಗರ ಪೊಲೀಸ್ ಆಯುಕ್ತ ಸಿ.ನಾಗರಾಜು ಹೇಳಿದ್ದಾರೆ.

“ಮಾಟ-ಮಂತ್ರ ಅಥವಾ ಆ ರೀತಿಯ ಕೃತ್ಯದಿಂದ ಸಾವು ಸಂಭವಿಸಿದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ನಮ್ಮ ತಂಡವು ಅಲ್ಲಿಗೆ ಇಂದು ರಾತ್ರಿ ತೆರಳಲಿದೆ. ವಿಧಿವಿಧಾನಗಳು ಪೂರ್ಣಗೊಂಡ ನಂತರ ನಾವು ಅಲ್ಲಿಂದ ಸಾಕ್ಷ್ಯಾಧಾರಗಳನ್ನು ತರುತ್ತೇವೆ. ಆದ್ದರಿಂದ ಇದಕ್ಕೆ ಕೊಂಚ ಸಮಯ ಹಿಡಿಯುತ್ತದೆ” ಎಂದು ಆಯುಕ್ತರು ಹೇಳಿದ್ದಾರೆ.

ಆ ಮೂವರು ಅಲ್ಲಿಗೆ ಏಕೆ ತೆರಳಿದರು ಹಾಗೂ ಅವರ ಮೃತ್ಯು ಹೇಗೆ ಸಂಭವಿಸಿತು ಎಂಬ ಕುರಿತು ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದಕ್ಕೂ ಮುನ್ನ, ಮಂಗಳವಾರದಂದು ಕೆಳ ಸುಬಾನ್ಸಿರಿ ಜಿಲ್ಲೆಯ ಹೋಟೆಲೊಂದರ ಕೊಠಡಿಯಿಂದ ನಿಗೂಢ ಸ್ಥಿತಿಯಲ್ಲಿ ಮೃತಪಟ್ಟಿರುವ ಮೂವರು ವ್ಯಕ್ತಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರುಣಾಚಲ ಪೊಲೀಸರು ಮಾಹಿತಿ ನೀಡಿದ್ದರು.

ಕೊಟ್ಟಾಯಂನ ದಂಪತಿಗಳು ಹಾಗೂ ತಿರವನಂತಪುರಂನ ಅವರ ಸ್ನೇಹಿತೆಯ ಮೃತದೇಹಗಳು ಜಿಲ್ಲಾ ಕೇಂದ್ರದ ಹಪೋಲಿಯ ಹೋಟೆಲ್ ಬ್ಲೂ ಪೈನ್ ನಲ್ಲಿ ಪತ್ತೆಯಾಗಿವೆ ಎಂದು ಅರುಣಾಚಲ ಪ್ರದೇಶ ಪೊಲೀಸರು ಹೇಳಿದ್ದರು.

ಮೃತರನ್ನು ತಿರುವನಂತಪುರಂ ನಿವಾಸಿ ಆರ್ಯ ಹಾಗೂ ಕೊಟ್ಟಾಯಂ ನಿವಾಸಿಗಳಾದ ನವೀನ್ ಹಾಗೂ ಆತನ ಪತ್ನಿ ದೇವಿ ಎಂದು ಗುರುತಿಸಲಾಗಿದೆ. ಇವರೆಲ್ಲ ಮಾರ್ಚ್ 28ರಂದು ಅರುಣಾಚಲ ಪ್ರದೇಶಕ್ಕೆ ಆಗಮಿಸಿದ್ದರು ಎಂದು ಹೇಳಲಾಗಿದೆ.

ಈ ಘಟನೆಯು ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡು ಬರುತ್ತಿದ್ದರೂ, ಮರಣೋತ್ತರ ಪರೀಕ್ಷೆ ನಡೆದ ನಂತರವಷ್ಟೆ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಅರುಣಾಚಲ ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News