ಕೇರಳ ಸಿಪಿಐ(ಎಂ) ಫೇಸ್ ಬುಕ್ ಪೇಜ್ ಹ್ಯಾಕ್: ವಿಪಕ್ಷದ ಅಭ್ಯರ್ಥಿಯ ವಿಡಿಯೊ ಪೋಸ್ಟ್

Update: 2024-11-11 12:33 GMT

PC : Facebook

ಪಟ್ಟಣಂತಿಟ್ಟ: ಕೇರಳದಲ್ಲಿ ಮಹತ್ವದ ಉಪಚುನಾವಣೆಗಳು ಸಮೀಪಿಸುತ್ತಿರುವಾಗಲೇ ರವಿವಾರ ಆಡಳಿತಾರೂಢ ಸಿಪಿಐ(ಎಂ) ಮುಜುಗರಕ್ಕೊಳಗಾಗಿದ್ದು, ಅದರ ಫೇಸ್ ಬುಕ್ ಪುಟ ಹ್ಯಾಕ್ ಆಗಿದೆ. ಆ ಪುಟದಲ್ಲಿ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ರಾಹುಲ್ ಮಮ್ಕೂತತ್ಹಿಲ್ ಅವರ ಚುನಾವಣಾ ಪ್ರಚಾರದ ವಿಡಿಯೊವನ್ನು ಕೆಲ ಹೊತ್ತು ಪ್ರದರ್ಶಿಸಲಾಗಿದೆ.

ಆರಂಭದಲ್ಲಿ ಆ ಪುಟವು ಪಕ್ಷದ ಅಧಿಕೃತ ಪುಟವಲ್ಲ ಎಂದು ಪ್ರತಿಪಾದಿಸಿದ್ದ ಜಿಲ್ಲಾ ನಾಯಕತ್ವವು, ನಂತರ ಸದರಿ ವಿಡಿಯೊವನ್ನು ಪೋಸ್ಟ್ ಮಾಡಲು ಆ ಪುಟವನ್ನು ಹ್ಯಾಕ್ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿತ್ತು. ಇದರಿಂದ ವಿವಾದ ಸ್ಫೋಟಗೊಂಡಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಟ್ಟಣತಿಟ್ಟಂ ಜಿಲ್ಲೆಯ ಸಿಪಿಐ(ಎಂ) ಕಾರ್ಯದರ್ಶಿ ಕೆ.ಪಿ.ಉದಯಭಾನು, ಮಾಧ್ಯಮಗಳು ಈ ಕುರಿತು ವರದಿ ಮಾಡಿದ ನಂತರವಷ್ಟೆ ನಮಗೆ ಸದರಿ ವಿಡಿಯೊ ಪೋಸ್ಟ್ ಆಗಿರುವುದು ಗಮನಕ್ಕೆ ಬಂದಿತು ಎಂದು ತಿಳಿಸಿದ್ದಾರೆ.

“ವಿಸ್ತೃತ ಪರಿಶೀಲನೆಯ ನಂತರ, ವಿವಾದವನ್ನು ಸೃಷ್ಟಿಸಲೆಂದೇ ಕೆಲವರು ಪುಟವನ್ನು ಹ್ಯಾಕ್ ಮಾಡಿದ್ದು, ಉದ್ದೇಶಪೂರ್ವಕವಾಗಿ ಆ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ನಂತರ, ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಸಿಪಿಐ(ಎಂ)ನ ಸಾಮಾಜಿಕ ಮಾಧ್ಯಮ ತಂಡ ತನ್ನ ಪುಟದಿಂದ ಆ ವಿಡಿಯೊವನ್ನು ತಕ್ಷಣವೇ ತೆಗೆದು ಹಾಕಿದ್ದು, ಈ ಕುರಿತು ಸೈಬರ್ ಪೊಲೀಸರು ಹಾಗೂ ಫೇಸ್ ಬುಕ್ ಪ್ರಾಧಿಕಾರಕ್ಕೆ ದೂರು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News