‘ತಪ್ಪುದಾರಿಗೆಳೆಯುವʼ ಜಾಹೀರಾತುಗಳಿಗಾಗಿ ರಾಮದೇವ್ ವಿರುದ್ಧ ಪ್ರಕರಣ ದಾಖಲಿಸಿದ ಕೇರಳ ಔಷಧಿ ನಿಯಂತ್ರಣ ಇಲಾಖೆ

Update: 2024-04-04 11:02 GMT

ಯೋಗಗುರು ರಾಮ್‌ದೇವ್ (PTI)

ತಿರುವನಂತಪುರ: ಮಲಯಾಳಂ ಮತ್ತು ಇಂಗ್ಲಿಷ್ ವೃತ್ತಪತ್ರಿಕೆಗಳಲ್ಲಿ ‘ತಪ್ಪುದಾರಿಗೆಳೆಯುವ ’ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಕೇರಳ ಔಷಧಿ ನಿಯಂತ್ರಣ ಇಲಾಖೆಯು ಯೋಗಗುರು ರಾಮ್‌ದೇವ್ ಮತ್ತು ಅವರ ಕಂಪನಿ ದಿವ್ಯಾ ಫಾರ್ಮಸಿ ವಿರುದ್ಧ ಕೊಝಿಕ್ಕೋಡ್‌ನ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದೆ.

ಕೊಝಿಕ್ಕೋಡ್‌ನ ಸಹಾಯಕ ಔಷಧಿ ನಿಯಂತ್ರಕರ ಕಚೇರಿಯ ಡ್ರಗ್ಸ್ ಇನ್ಸ್‌ಪೆಕ್ಟರ್ ಅಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಈ ದೂರನ್ನು ಸಲ್ಲಿಸಿದ್ದಾರೆ. ರಾಮದೇವ್ ಜೊತೆ ಪತಂಜಲಿ ಆಯುರ್ವೇದ್‌ನ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ರಾಮದೇವ್ ಮತ್ತು ಬಾಲಕೃಷ್ಣ ಅವರು ದಿವ್ಯ ಫಾರ್ಮಸಿಯನ್ನು ನಡೆಸುತ್ತಿರುವ ದಿವ್ಯ ಯೋಗ ಮಂದಿರ (ಟ್ರಸ್ಟ್)ದ ಪದಾಧಿಕಾರಿಗಳಾಗಿದ್ದಾರೆ.

ದಿವ್ಯ ಫಾರ್ಮಸಿ ಲೈಂಗಿಕ ದೌರ್ಬಲ್ಯ ಮತ್ತು ಮಧುಮೇಹವನ್ನು ಗುಣಪಡಿಸುತ್ತವೆ ಎಂದು ಹೇಳಿಕೊಂಡು ಔಷಧೀಯ ಉತ್ನನ್ನಗಳ ಪ್ರಚಾರ ಮಾಡಿದೆ. ಇವು ‘ಔಷಧಿ ಮತ್ತು ಮಾಂತ್ರಿಕ ಪರಿಹಾರಗಳ ಆಕ್ಷೇಪಾರ್ಹ ಜಾಹೀರಾತುಗಳ ಕಾಯ್ದೆ’ಯಡಿ ಚಿಕಿತ್ಸೆಗಳ ಪ್ರಚಾರವನ್ನು ನಿಷೇಧಿಸಲಾಗಿರುವ 54 ಕಾಯಿಲೆಗಳಲ್ಲಿ ಸೇರಿವೆ ಎಂದು ಇಲಾಖೆಯು ತನ್ನ ದೂರಿನಲ್ಲಿ ತಿಳಿಸಿದೆ.

ಫೆಬ್ರವರಿ 2022ರಲ್ಲಿ ಕಣ್ಣೂರಿನ ನೇತ್ರತಜ್ಞ ಕೆ.ವಿ.ಬಾಬು ಅವರು ದಿವ್ಯ ಫಾರ್ಮಸಿ ವಿರುದ್ಧ ದೂರು ಸಲ್ಲಿಸಿದ್ದರು.ಇದನ್ನನುಸರಿಸಿ ಕೇರಳ ಔಷಧಿ ನಿಯಂತ್ರಣ ಇಲಾಖೆಯು ತನಿಖೆಗೆ ಆದೇಶಿಸಿತ್ತು. ಫಾರ್ಮಸಿಯು ಕಾಯ್ದೆಯನ್ನು ಉಲ್ಲಂಘಿಸಿದ್ದ ಹಲವಾರು ನಿದರ್ಶನಗಳು ತನಿಖೆಯಲ್ಲಿ ಬೆಳಕಿಗೆ ಬಂದಿದ್ದವು.

ಎಪ್ರಿಲ್ 2022 ಮತ್ತು ಅಕ್ಟೋಬರ್ 2023ರ ನಡುವೆ ಮಲಯಾಳಂ ಮತ್ತು ಇಂಗ್ಲಿಷ್ ವೃತ್ತಪತ್ರಿಕೆಗಳಲ್ಲಿ ಕೊಝಿಕ್ಕೋಡ್‌ನಲ್ಲಿ ಏಳು,ಎರ್ನಾಕುಲಮ್‌ನಲ್ಲಿ ಆರು,ತ್ರಿಶೂರು ಮತ್ತು ಕೊಲ್ಲಮ್‌ನಲ್ಲಿ ತಲಾ ಐದು,ತಿರುವನಂತಪುರದಲ್ಲಿ ನಾಲ್ಕು ಮತ್ತು ಕಣ್ಣೂರಿನಲ್ಲಿ ಎರಡು ಉಲ್ಲಂಘನೆಗಳು ಪತ್ತೆಯಾಗಿದ್ದವು.

ಸರ್ವೋಚ್ಚ ನ್ಯಾಯಾಲಯವು ತಪ್ಪುದಾರಿಗೆಳೆಯುವ ಜಾಹೀರಾತುಗಳಿಗಾಗಿ ಪತಂಜಲಿ ಆಯುರ್ವೇದ್‌ನ ಸಹಸಂಸ್ಥಾಪಕರಾದ ರಾಮದೇವ ಮತ್ತು ಬಾಲಕೃಷ್ಣ ಅವರ ವಿರುದ್ಧ ಆರಂಭಿಸಲಾಗಿದ್ದ ನ್ಯಾಯಾಂಗ ನಿಂದನೆ ಕ್ರಮದಲ್ಲಿ ಅನುಸರಣಾ ಅಫಿಡವಿಟ್‌ಗಳನ್ನು ಸಲ್ಲಿಸಲು ಅವರಿಗೆ ಕೊನೆಯ ಅವಕಾಶವನ್ನು ನೀಡಿದ ಒಂದು ದಿನ ಮೊದಲು,ಅಂದರೆ ಸೋಮವಾರ ಕೇರಳ ಔಷಧಿ ನಿಯಂತ್ರಣ ಇಲಾಖೆಯ ದೂರು ದಾಖಲಾಗಿದೆ.

ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಸರ್ವೋಚ್ಚ ನ್ಯಾಯಾಲಯದಲ್ಲಿ ಪತಂಜಲಿ ಆಯುರ್ವೇದ್‌ನ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News