ಕೇಂದ್ರ ಸರಕಾರದ ವಿರುದ್ಧ ಕೇರಳ ವಿಧಾನ ಸಭೆ ನಿರ್ಣಯ ಅಂಗೀಕಾರ

Update: 2024-02-02 16:56 GMT

ಕೇರಳ ವಿಧಾನ ಸಭೆ 

ತಿರುವನಂತಪುರ: ಆರ್ಥಿಕವಾಗಿ ರಾಜ್ಯದ ಕತ್ತು ಹಿಸುಕುವ ಮೂಲಕ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿ ಕೇರಳ ವಿಧಾನ ಸಭೆ ಶುಕ್ರವಾರ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದೆ.

ವಿಧಾನ ಸಭೆಯಲ್ಲಿ ಪ್ರತಿಪಕ್ಷದ ಸದಸ್ಯರ ಅನುಪಸ್ಥಿತಿಯ ಹೊರತಾಗಿಯೂ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಎ.ಎನ್. ಶಂಶೀರ್ ಘೋಷಿಸಿದ್ದಾರೆ.

ನಿರ್ಣಯವನ್ನು ಮಂಡಿಸಿದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು, ಕೇಂದ್ರ ಸರಕಾರ ಕೇರಳದ ಸಾಲ ಪಡೆಯುವ ಮಿತಿಯನ್ನು ಕಡಿಮೆಗೊಳಿಸಿದೆ ಹಾಗೂ ಆದಾಯ ಕೊರತೆಯ ಅನುದಾನವನ್ನು ಕಡಿತಗೊಳಿಸಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಿರ್ಣಯಕ್ಕೆ ಬೆಂಬಲವಾಗಿ ನಿಲ್ಲುವ ಬದಲು ವಿಧಾನ ಸಭೆಯ ಕಲಾಪವನ್ನು ಬಹಿಷ್ಕರಿಸಿದೆ ಎಂದು ಹೇಳಿದರು.

‘‘ಕೇಂದ್ರ ಸರಕಾರದ ಈ ಎಲ್ಲಾ ಕ್ರಮಗಳು ದೇಶದ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವಂತಿದೆ. ಕೇಂದ್ರ ಸರಕಾರವು ಕೇಂದ್ರ ಪಟ್ಟಿಯ ಮೇಲೆ ಸಂಪೂರ್ಣ ಅಧಿಕಾರ ಹೊಂದಿರುವಂತೆ, ಸಂವಿಧಾನವು ರಾಜ್ಯ ಪಟ್ಟಿಯ ಮೇಲೆ ರಾಜ್ಯಕ್ಕೆ ಸಂಪೂರ್ಣ ಅಧಿಕಾರವನ್ನು ನೀಡಿದೆ’’ ಎಂದು ಬಾಲಗೋಪಾಲ್ ಅವರು ಹೇಳಿದ್ದಾರೆ.

ಕೇಂದ್ರ ಸರಕಾರ ಹಣಕಾಸು ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಿದೆ ಹಾಗೂ ಕೇರಳದ ಸಾಲ ಪಡೆಯುವ ಮಿತಿಯನ್ನು ಇಳಿಸಿದೆ ಎಂದು ಅವರು ಗಮನ ಸೆಳೆದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News