ವಯನಾಡ್ ಭೂಕುಸಿತವನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಲು ನಿರಾಕರಿಸಿದ ಕೇಂದ್ರ

Update: 2024-08-03 05:50 GMT

Photo: PTI

ವಯನಾಡ್: ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಎರಡು ಗ್ರಾಮಗಳು ನಾಮಾವಶೇಷವಾಗಿದೆ. 300 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಇನ್ನೂ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಈ ದುರಂತವನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸುವಂತೆ ಕೇರಳ ಸರಕಾರ ಕೇಂದ್ರಕ್ಕೆ ಆಗ್ರಹಿಸಿತ್ತು. ಆದರೆ ವಯನಾಡು ಭೀಕರ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ಸರಕಾರ ನಿರಾಕರಿಸಿದೆ.

ಈ ಹಿನ್ನೆಲೆಯಲ್ಲಿ ಕೇರಳ ಸರಕಾರವು ಈ ದುರಂತವನ್ನು 'ರಾಜ್ಯ ವಿಪತ್ತು' ಎಂದು ಘೋಷಿಸಲು ಮುಂದಾಗಿದೆ. ಮೇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು 'ವಿಪತ್ತು ಪೀಡಿತ' ಪ್ರದೇಶ ಎಂದು ಘೋಷಿಸಿ ಈಗಾಗಲೇ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಕುರಿತು ಸುದ್ದಿಸಂಸ್ಥೆ Deccan Herald ಗೆ ಪ್ರತಿಕ್ರಿಯಿಸಿದ ಕೇರಳದ ಕಂದಾಯ ಸಚಿವ ಕೆ.ರಾಜನ್‌, "ನಾವು ಈ ದುರಂತವನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ ಅವರು ಕಾನೂನಾತ್ಮಕ ಸಮಸ್ಯೆಗಳಿವೆ ಎಂದು ಹೇಳಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನಿರಾಕರಿಸಿದ್ದಾರೆ. ಆದ್ದರಿಂದ ನಾವು ಈ ದುರಂತವನ್ನು 'ರಾಜ್ಯ ವಿಪತ್ತು' ಎಂದು ಘೋಷಿಸಲಿದ್ದೇವೆ ಎಂದು ಹೇಳಿದ್ದಾರೆ.

ಜುಲೈ 29 ಹಾಗೂ 30ರ ನಡುವೆ ವಯನಾಡ್ ನಲ್ಲಿ ಕೇವಲ 24 ಗಂಟೆ ಅವಧಿಯಲ್ಲಿ 572 ಮಿಲಿಮೀಟರ್ ಮಳೆಯಾಗಿದ್ದು, ಭಾರಿ ಪ್ರಮಾಣದ ಭೂಕುಸಿತಕ್ಕೆ ಕಾರಣವಾಗಿತ್ತು. ಈಗಲೂ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

2018ರಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದ ದುರಂತವನ್ನು ಹೊರತುಪಡಿಸಿದರೆ, ಕೇರಳದ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಪ್ರಕೃತಿ ವಿಕೋಪವಾಗಿದೆ. ಅರಬ್ಬೀಸಮುದ್ರದಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಮತ್ತು ಗಣಿಗಾರಿಕೆಯಂಥ ಪರಿಸರಕ್ಕೆ ಹಾನಿ ತರುವ ಚಟುವಟಿಕೆಗಳ ಏರಿಕೆಯಿಂದಾಗಿ, ಹಸಿರು ಮರೆಯಾಗಿರುವುದಿಂದ ಇಂಥ ಭೂಕುಸಿತಗಳ ಸಾಧ್ಯತೆ ಹೆಚ್ಚು ಎಂದು ಹವಾಮಾನ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News