LSG ಮಾಲಕ ಸಂಜೀವ್ ಗೋಯೆಂಕಾ ಅವರೊಂದಿಗೆ ನಡೆದ ಮಾತುಕತೆ ಕುರಿತು ಮೌನ ಮುರಿದ ಕೆ.ಎಲ್. ರಾಹುಲ್
ಮುಂಬೈ: 2024 ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಾಗ ಲಕ್ನೋ ಸೂಪರ್ ಜೈಂಟ್ಸ್ (LSG) ಮಾಲಕ ಸಂಜೀವ್ ಗೋಯೆಂಕಾ ಅವರೊಂದಿಗೆ ನಡೆದ ಸಂಭಾಷಣೆಯ ಕುರಿತು ಭಾರತದ ವಿಕೆಟ್‌ಕೀಪರ್ ಬ್ಯಾಟರ್ ಕೆ.ಎಲ್. ರಾಹುಲ್ ಮಾತನಾಡಿದ್ದಾರೆ.
ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಗೆ ದೊಡ್ಡ ಗೆಲುವಿನ ಅಗತ್ಯವಿತ್ತು, ಆದರೆ ತಂಡವು 10 ವಿಕೆಟ್‌ಗಳಿಂದ ಸೋತಿತು. LSG ಮಾಲಕರು ಪಂದ್ಯದ ಫಲಿತಾಂಶದ ನಂತರ ಬಹಿರಂಗವಾಗಿ ಅಸಮಾಧಾನಗೊಂಡಿದ್ದರು. ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬೌಂಡರಿ ಬಳಿ ನಿಂತು ನಾಯಕ ರಾಹುಲ್ ಅವರೊಂದಿಗೆ ತೀವ್ರ ಚರ್ಚೆಯಲ್ಲಿ ತೊಡಗಿದ್ದು ಕ್ಯಾಮೆರ ಕಣ್ಣಲ್ಲಿ ಸೆರೆಯಾಗಿತ್ತು.
"ಒಂದು ತಂಡವಾಗಿ, ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ಏಕೆಂದರೆ ಆ ಪಂದ್ಯಾವಳಿಯಲ್ಲಿ ನಾವು ಪ್ರತಿ ಪಂದ್ಯವೂ ಬಹಳ ಮುಖ್ಯವಾದ ಹಂತದಲ್ಲಿದ್ದೆವು. ನಾವು ಐದು ಪಂದ್ಯಗಳಲ್ಲಿ ಮೂರು ಅಥವಾ ಕೊನೆಯ ನಾಲ್ಕು ಪಂದ್ಯಗಳಲ್ಲಿ ಎರಡನ್ನು ಗೆಲ್ಲಬೇಕಾಗಿತ್ತು. ಈ ಘಟನೆಯು ನಮಗೆಲ್ಲರಿಗೂ ದೊಡ್ಡ ಆಘಾತವಾಗಿತ್ತು" ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ರಾಹುಲ್ ಹೇಳಿದ್ದಾರೆ.
ರಾಹುಲ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮಾಲಕ ಸಂಜೀವ್ ಗೋಯೆಂಕಾ ನಡುವಿನ ಸಂಭಾಷಣೆಯ ವಿಷಯವು ಕೇಳಿಸುವುದಿಲ್ಲವಾದರೂ, ಪಂದ್ಯದ ಪ್ರಸಾರಕರು ಸೆರೆಹಿಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಪಂದ್ಯ ಸೋತಾಗ ನಡೆಯುವ ಚರ್ಚೆಗಳು ಪ್ರೇಕ್ಷಕರ ಮುಂದೆ ನಡೆಯದೆ ಖಾಸಗಿಯಾಗಿ ನಡೆಯಬೇಕು ಎಂದು ತಜ್ಞರು ಮತ್ತು ಅಭಿಮಾನಿಗಳು ಸಲಹೆ ನೀಡಿದ್ದರು.
LSG ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ, 165 ರನ್ ಗಳಿಸಿತು. ನಾಯಕ ಕೆ ಎಲ್ ರಾಹುಲ್ 33 ಎಸೆತಗಳಲ್ಲಿ 29 ರನ್ ಗಳಿಸಿದರು. ಪ್ರತ್ಯುತ್ತರವಾಗಿ, ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕರಾದ ಟ್ರಾವಿಸ್ ಹೆಡ್ (30 ಎಸೆತಗಳಲ್ಲಿ 89) ಮತ್ತು ಅಭಿಷೇಕ್ (28 ಎಸೆತಗಳಲ್ಲಿ 75) ಬಾರಿಸಿ ಲಕ್ನೊ ಸೂಪರ್ ಜೈಂಟ್ ಬೌಲರ್‌ಗಳ ಬೆವರಿಳಿಸಿದರು. ಎಸ್‌ಆರ್‌ಎಚ್ ಕೇವಲ 9.4 ಓವರ್‌ಗಳಲ್ಲಿ 166 ರನ್‌ಗಳ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿತು.
ನಿರ್ದಿಷ್ಟ ಪಂದ್ಯದ ಕುರಿತು ಮಾತನಾಡಿದ ರಾಹುಲ್, "ನಾನು ಆಟಗಾರನಾಗಿ ಭಾಗವಾಗಿರುವ ಅತ್ಯಂತ ಕೆಟ್ಟ ಆಟಗಳಲ್ಲಿ ಅದು ಒಂದಾಗಿತ್ತು" ಎಂದು ಹೇಳಿದ್ದಾರೆ.