ಈದ್ ದಿನದಂದೇ ಋತಿ ಪೂಜೆ ಮಾಡಿ ಸೌಹಾರ್ದ ಸಾರಿದ ಪಶ್ಚಿಮ ಬಂಗಾಳದ ಜನತೆ
ಕೊಲ್ಕತ್ತಾ: ಕೊಲ್ಕತ್ತಾದಲ್ಲಿ ನಡೆದ ಸಮುದಾಯ ದುರ್ಗಾ ಪೂಜೆ ಸಮಿತಿಯ ಕಾರ್ಯಕ್ರಮದಲ್ಲಿ ನಾದಿಮ್ ಆಲಿ ಮತ್ತು ಸಂಜೀದಾ ಅವರ ಪುತ್ರಿ ಆರು ವರ್ಷದ ಬಾಲಕಿ ರಿಮ್ಶಾ ಎಲ್ಲರ ಗಮನಸೆಳೆದಿದ್ದಾಳೆ. ದುರ್ಗಾ ಪೂಜೆಯ ನಿಮಿತ್ತ ನಡೆಯುವ ಖುತಿ ಪೂಜೆಯನ್ನು (ಸಾಂಕೇತಿಕ ಕುಮಾರಿ ಪೂಜಾ) ಆಯೋಜಕರು ‘ಈದುಲ್ ಅಝ್ಹಾ’ ದಿನದಂದು ನಡೆಸಲು ಉದ್ದೇಶಿಸಿ ಸೌಹಾರ್ದದ ಸಂದೇಶ ಸಾರಿದ್ದಾರೆ.
ಖುತಿ ಪೂಜೆಯು ದುರ್ಗಾ ಪೂಜೆಯ ತಯಾರಿಯ ಆರಂಭವಾಗಿದ್ದು ಈ ಸಂದರ್ಭ ಪೆಂಡಾಲ್ ಹಾಕುವ ಕಾರ್ಯಕ್ರಮ ನಡೆಯುತ್ತದೆ. ಸಾಮಾನ್ಯವಾಗಿ ಖುತಿ ಪೂಜೆಯು ರಥ ಯಾತ್ರೆ ಅಥವಾ ಉಲ್ಟಾ ರಥ್ (ರಥ ಯಾತ್ರೆಯ ವಾಪಸಾತಿ) ವೇಳೆ ನಡೆಯುತ್ತಿದೆ. ಆದರೆ ಈ ಬಾರಿ ಆಯೋಜಕರು ಈದ್ ದಿನವನ್ನು ಅದಕ್ಕಾಗಿ ಆಯ್ದುಕೊಂಡಿದ್ದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಲವು ಘಟನೆಗಳು ನಡೆಯುವ ಕಾಲಘಟ್ಟದಲ್ಲಿ ಮುಸ್ಲಿಂ ಬಾಲಕಿಯೊಬ್ಬಳನ್ನು ಖುತಿ ಪೂಜೆ ದಿನ ದುರ್ಗೆಯಾಗಿ ಸಿಂಗರಿಸಿರುವುದರ ಹಿಂದೆ ಒಂದು ಸಂದೇಶ ಸಾರುವ ಉದ್ದೇಶವೂ ಕಾರ್ಯಕ್ರಮ ಆಯೋಜಕರಾದ ಬಾರಾನಗರ್ ಫ್ರೆಂಡ್ಸ್ ಅಸೋಸಿಯೇಶನ್‌ಗೆ ಇತ್ತು.
ಈ ಖುತಿ ಪೂಜೆ ಸಂದರ್ಭ ಸಂಘದ ಅಧ್ಯಕ್ಷ ಅಜಯ್ ಘೋಷ್ ಅವರು ನೆರೆಹೊರೆಯ ಮುಸ್ಲಿಂ ಸ್ನೇಹಿತರನ್ನೂ ಆಹ್ವಾನಿಸಿದರು. ಈ ವರ್ಷ ರಾಮನವಮಿ ಸಂದರ್ಭ ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಕಾರಣ ಈ ಬಾರಿ ಖುತಿ ಪೂಜೆಯನ್ನು ವಿಭಿನ್ನವಾಗಿ ಆಯೋಜಿಸಲಾಯಿತು ಎಂದು ಅವರು ಹೇಳಿದ್ದಾರೆ.
ಸಿಂತಿ ಎಂಬಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದ ಜನರು ಪಾಲ್ಗೊಂಡರು, ಮುಸ್ಲಿಂ ಬಾಂಧವರು ತಮ್ಮ ಈದ್ ಹೊಸ ಬಟ್ಟೆಗಳನ್ನು ಧರಿಸಿ ಸಂತಸದಿಂದ ಭಾಗವಹಿಸಿದರು.
ಅಂಗೈ ಮತ್ತು ಪಾದಗಳಿಗೆ ಕೆಂಪು ಬಣ್ಣ ಹಾಕಲಾಗಿದ್ದ ರಿಮ್ಶಾ ಎಲ್ಲರ ಗಮನ ಸೆಳೆದಳು, ದುರ್ಗೆಯ ಅವತಾರವೆಂದು ಆಕೆಯನ್ನು ಅರ್ಚಕರು ಪೂಜಿಸಿದರು. ಘೋಷ್ ತಮ್ಮನ್ನು ಸಂಪರ್ಕಿಸಿ ಈ ಪ್ರಸ್ತಾವನೆ ಮುಂದಿಟ್ಟಾಗ ಆನಂದಗೊಂಡೆ ಎಂದು ಬಾಲಕಿಯ ತಂದೆ ಆಲಿ ಹೇಳುತ್ತಾರೆ. ಅವರು ಸಿಂತಿಯಲ್ಲಿ ಟೈಲರಿಂಗ್ ಅಂಗಡಿ ಹೊಂದಿದ್ದಾರೆ. ಬಾಲಕಿಯ ತಾಯಿಗೂ ಅತೀವ ಸಂತೋಷವಾಗಿದೆ.
ಈದ್ ದಿನ ಕುಟುಂಬ ಕೊಸ್ಸಿಪೋರ್‌ನಲ್ಲಿರುವ ಬೈಶಾಕ್ ಬಗನ್ ಜಮಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಪೂಜೆಗೆ ಆಗಮಿಸಿದೆ.