ಪಿಸ್ತೂಲ್ ತೋರಿಸಿ ಬೆದರಿಸಿದ ಆರೋಪ: ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್‌ರ ತಾಯಿ ಪೊಲೀಸ್ ವಶಕ್ಕೆ
ಪುಣೆ: ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ಆರೋಪದಲ್ಲಿ ವಿವಾದಾತ್ಮಕ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಅವರನ್ನು ಮಹಾರಾಷ್ಟ್ರದ ರಾಯ್‌ಗಢ ಜಿಲ್ಲೆಯ ಮಹಾಡ್‌ನಿಂದ ವಶಕ್ಕೆ ಪಡೆಯಲಾಗಿದೆ ಎಂದು ಪುಣೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪುಣೆಯ ಮುಲ್ಷಿ ತಾಲ್ಲೂಕಿನ ಧಡ್ವಾಲಿ ಗ್ರಾಮದಲ್ಲಿನ ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳಿಗೆ ಗನ್ ತೋರಿಸಿ ಬೆದರಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಪೊಲೀಸರು ಮನೋರಮಾ ಖೇಡ್ಕರ್ ಹಾಗೂ ಅವರ ಪತಿ ದಿಲೀಪ್ ಖೇಡ್ಕರ್ ಅವರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದರು.
ಈ ಸಂಬಂಧ ಪುಣೆಯ ಗ್ರಾಮಾಂತರ ಜಿಲ್ಲೆಯ ಪೌಡ್ ಠಾಣೆಯ ಪೊಲೀಸರು ಖೇಡ್ಕರ್ ದಂಪತಿಗಳ ವಿರುದ್ಧ ಸೆಕ್ಷನ್ 323 ಸೇರಿದಂತೆ ವಿವಿಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಪುಣೆ ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ದೇಶ್‌ಮುಖ್, "ಮನೋರಮಾ ಖೇಡ್ಕರ್ ಅವರನ್ನು ರಾಯ್‌ಗಢ ಜಿಲ್ಲೆಯ ಮಹಾಡ್‌ನಿಂದ ವಶಕ್ಕೆ ಪಡೆಯಲಾಗಿದ್ದು, ಅವರನ್ನು ಪುಣೆಗೆ ಕರೆ ತರಲಾಗಿದೆ" ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಮನೋರಮಾ, ಅವರ ಪತಿ ಹಾಗೂ ಇನ್ನಿತರ ಐವರು ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿತ್ತು.