ದಿಲ್ಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಚಿಂತಾಜನಕವಾಗಿದೆ, ಕೇಂದ್ರವನ್ನು ಹೊಣೆಯಾಗಿಸುತ್ತೇವೆ: ಅರವಿಂದ್ ಕೇಜ್ರಿವಾಲ್

Update: 2024-12-08 16:33 GMT

ಅರವಿಂದ ಕೇಜ್ರಿವಾಲ್ | PC : PTI

ಹೊಸದಿಲ್ಲಿ: ದಿಲ್ಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ‘ಚಿಂತಾಜನಕ’ವಾಗಿರುವುದಕ್ಕೆ ರವಿವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು, ತನ್ನ ಪಕ್ಷದ ಸರಕಾರವು ದಿಲ್ಲಿ ಪೋಲಿಸರ ಮೇಲೆ ನಿಯಂತ್ರಣ ಹೊಂದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು ಎಂದು ಪ್ರತಿಪಾದಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಿಲ್ಲಿಯ ಕರೋಲಬಾಗ್‌ನಲ್ಲಿ ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರದ ಮೇಲೆ ಒತ್ತಡ ಹೇರಲು ತಾನು ಅವರೊಂದಿಗೆ ಆಂದೋಲನವನ್ನು ಆರಂಭಿಸುವುದಾಗಿ ಹೇಳಿದರು.

‘ದಿಲ್ಲಿ ಪೋಲಿಸ್ ನಮ್ಮ ನಿಯಂತ್ರಣದಲ್ಲಿಲ್ಲ, ಇದ್ದಿದ್ದರೆ ದಿಲ್ಲಿಯಲ್ಲಿನ ಪರಿಸ್ಥಿತಿ ಇಷ್ಟೊಂದು ಕೆಟ್ಟದಾಗಿರುತ್ತಿರಲಿಲ್ಲ. ಶಾಲೆಗಳು,ಆಸ್ಪತ್ರೆಗಳು ಮತ್ತು ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನೂ ನಾನು ಸರಿಪಡಿಸುತ್ತಿದ್ದೆ’ ಎಂದು ಹೇಳಿದ ಕೇಜ್ರಿವಾಲ್,‘ನಾವು ಈಗ ನಮ್ಮ ಧ್ವನಿಯನ್ನೆತ್ತುವ ಅಗತ್ಯವಿದೆ. ನಾವೆಲ್ಲರೂ ಒಟ್ಟಾಗಿ ಧ್ವನಿಯೆತ್ತಬೇಕು. ನಾನು ದಿಲ್ಲಿಯ ಎಲ್ಲರನ್ನೂ ಒಗ್ಗೂಡಿಸುತ್ತೇನೆ ಮತ್ತು ದಿಲ್ಲಿಗೆ ಸುರಕ್ಷತೆಯನ್ನು ಒದಗಿಸುವಂತೆ ನಾವು ಬಿಜೆಪಿ ನಾಯಕರನ್ನು ಆಗ್ರಹಿಸುತ್ತೇವೆ’ ಎಂದರು.

‘ವಿದ್ಯುತ್,ನೀರು,ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ವ್ಯವಸ್ಥೆಗಳನ್ನು ಸರಿಪಡಿಸಲು ದಿಲ್ಲಿ ನನ್ನನ್ನು ಆಯ್ಕೆ ಮಾಡಿತ್ತು ಮತ್ತು ನಾನು ಅವೆಲ್ಲವನ್ನೂ ಮಾಡಿದ್ದೇನೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಬಿಜೆಪಿ ನಿರ್ವಹಿಸಬೇಕಿತ್ತು,ಆದರೆ ಅವರು ಅದನ್ನು ಹಾಳು ಮಾಡಿದ್ದಾರೆ ’ಎಂದು ಅವರು ಆರೋಪಿಸಿದರು.

ಆಪ್ ಸರಕಾರವು ನಗರದ ಪ್ರತಿಯೋರ್ವ ಮಹಿಳೆಗೆ 1,000 ರೂ.ಗೌರವ ಧನವನ್ನು ನೀಡುವ ಯೋಜನೆಯನ್ನು ಶೀಘ್ರವೇ ಆರಂಭಿಸಲಿದೆ ಎಂದು ಕೇಜ್ರಿವಾಲ್ ಈ ಸಂದರ್ಭದಲ್ಲಿ ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News