ಕ್ರೀಡಾ ಸಚಿವರ ಅಧಿಕಾರ ಮೊಟಕುಗೊಳಿಸಲು ಕಾನೂನು: ಶ್ರೀಲಂಕಾ ಅಧ್ಯಕ್ಷ
ಕೊಲಂಬೊ: ಮಧ್ಯಂತರ ಸಮಿತಿಗಳನ್ನು ನೇಮಿಸುವ ಕ್ರೀಡಾ ಸಚಿವರ ಅಧಿಕಾರವನ್ನು ಮೊಟಕುಗೊಳಿಸುವ ಕಾನೂನೊಂದನ್ನು ತರುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಶ್ರೀಲಂಕಾ ಅಧ್ಯಕ್ಷ ರಣಿಲ್ ವಿಕ್ರಮ್‌ಸಿಂಘೆ ಹೇಳಿದ್ದಾರೆ.
ಸರಕಾರದ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಕಳೆದ ತಿಂಗಳು ಶ್ರೀಲಂಕಾ ಕ್ರಿಕೆಟನ್ನು ಅಮಾನತಿನಲ್ಲಿರಿಸಿತ್ತು ಮತ್ತು ಶ್ರೀಲಂಕಾದಲ್ಲಿ ನಡೆಯಬೇಕಾಗಿದ್ದ ಅಂಡರ್-19 ವಿಶ್ವಕಪ್‌ನ್ನು ದಕ್ಷಿಣ ಆಫ್ರಿಕಕ್ಕೆ ವರ್ಗಾಯಿಸಿತ್ತು.
ಶ್ರೀಲಂಕಾ ಕ್ರಿಕೆಟ್‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ಮಂಡಳಿಯ ವ್ಯವಹಾರಗಳನ್ನು ನೋಡಿಕೊಳ್ಳಲು ವಿಶ್ವಕಪ್ ವಿಜೇತ ಮಾಜಿ ನಾಯಕ ಅರ್ಜುನ ರಣತುಂಗ ನೇತೃತ್ವದಲ್ಲಿ ಮಧ್ಯಂತರ ಸಮಿತಿಯೊಂದನ್ನು ಕ್ರೀಡಾ ಸಚಿವ ರೋಶನ್ ರಣಸಿಂಘೆ ನೇಮಿಸಿದ ಬಳಿಕ ಐಸಿಸಿ ಈ ಕ್ರಮ ತೆಗೆದುಕೊಂಡಿತ್ತು.
ಇದಕ್ಕಾಗಿ ನವೆಂಬರ್ 27ರಂದು ವಿಕ್ರಮಸಿಂಘೆ ಕ್ರೀಡಾ ಸಚಿವ ರಣಸಿಂಘೆಯನ್ನು ವಜಾಗೊಳಿಸಿದ್ದರು.
ಕೊಲಂಬೊ ಕೋಲ್ಟ್ಸ್ ಕ್ರಿಕೆಟ್ ಕ್ಲಬ್‌ನ 150ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ವಿಕ್ರಮಸಿಂಘೆ, ಕ್ರಿಕೆಟ್ ಆಡಳಿತದಿಂದ ರಾಜಕೀಯವನ್ನು ಸಂಪೂರ್ಣವಾಗಿ ತೊಡೆದುಹಾಕಲು ತಾನು ಉದ್ದೇಶಿಸಿರುವುದಾಗಿ ಹೇಳಿದರು.