ದ್ವೇಷದ ರಾಜಕಾರಣ ಬದಿಗಿರಿಸಿ, ನೈಜ ಸಮಸ್ಯೆಗಳ ಬಗ್ಗೆ ಮಾತನಾಡಿ: ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಧಾನಿಗೆ ತೇಜಸ್ವಿ ಯಾದವ್‌ ಮನವಿ

Update: 2024-04-22 09:53 GMT

ತೇಜಸ್ವಿ ಯಾದವ್‌ | PC :  PTI 

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದಲ್ಲಿ ಮಾಡಿರುವ ವಿವಾದಾತ್ಮಕ ಭಾಷಣದ ಹಿನ್ನೆಲೆಯಲ್ಲಿ ಆರ್ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಭಾವನಾತ್ಮಕ ಮನವಿಯನ್ನು ಮಾಡಿದ್ದಾರೆ. 2024ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದರೆ ಅದು ದೇಶದ ಆಸ್ತಿಗಳನ್ನು ನುಸುಳುಕೋರರಿಗೆ ಹಂಚಲಿದೆ ಎಂದು ಪ್ರಧಾನಿ ತನ್ನ ಭಾಷಣದಲ್ಲಿ ಹೇಳಿದ್ದರು. ಮುಸ್ಲಿಮ್ ಸಮುದಾಯದ ವಿರುದ್ಧವೂ ದ್ವೇಷದ ಮಾತುಗಳನ್ನಾಡಿದ್ದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ, ‘ಪ್ರಧಾನಿಯವರಿಗೆ ನಾನು ಇಷ್ಟನ್ನು ಮಾತ್ರ ಹೇಳಬೇಕಿದೆ ಮತ್ತು ಅದನ್ನು ಕೈಗಳನ್ನು ಜೋಡಿಸಿ ಹೇಳುತ್ತೇನೆ. ದಯವಿಟ್ಟು ನೈಜ ಸಮಸ್ಯೆಗಳ ಬಗ್ಗೆ ಮಾತನಾಡಿ ಮತ್ತು ದ್ವೇಷದ ರಾಜಕಾರಣವನ್ನು ಬದಿಗಿರಿಸಿ. ದೇಶದ ಯುವಜನರು ಮತ್ತು ಹಿರಿಯರು, ರೈತರು ಮತ್ತು ಉದ್ಯಮಿಗಳು, ತಾಯಂದಿರು ಮತ್ತು ಸೋದರಿಯರು; ಎಲ್ಲರೂ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ’ಎಂದು ಹೇಳಿದರು.

‘ಪ್ರತಿಯೊಬ್ಬರೂ ಬಡತನದಿಂದ ಪಾರಾಗಲು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳನ್ನು ನಿಭಾಯಿಸಲು ಉದ್ಯೋಗಗಳನ್ನು ಹುಡುಕಿಕೊಳ್ಳಲು ಬಯಸುತ್ತಿದ್ದಾರೆ. ಹೀಗಾಗಿ ನೈಜ ಸಮಸ್ಯೆಗಳನ್ನು ಚರ್ಚಿಸುವಂತೆ ಮತ್ತು ಕಳೆದ 10 ವರ್ಷಗಳಲ್ಲಿ ನೀವು ದೇಶಕ್ಕಾಗಿ ಮತ್ತು ಬಿಹಾರಕ್ಕಾಗಿ ಏನು ಮಾಡಿದ್ದೀರಿ ಎನ್ನುವುದನ್ನು ನಮಗೆ ತಿಳಿಸುವಂತೆ ಮತ್ತೊಮ್ಮೆ ಪ್ರಧಾನಿಯನ್ನು ಕೇಳಿಕೊಳ್ಳುತ್ತಿದ್ದೇನೆ ’ಎಂದರು

ಬಿಹಾರಕ್ಕಾಗಿ, ದೇಶಕ್ಕಾಗಿ ನಿಮ್ಮ ನಿಜವಾದ ದೃಷ್ಟಿಕೋನವೇನು? ನೀವು ಇದರ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ದೇವಸ್ಥಾನಗಳು (ಅಯೋಧ್ಯೆಯ ರಾಮ ಮಂದಿರವನ್ನು ಪ್ರಸ್ತಾಪಿಸಿ) ಮತ್ತು ಮುಸ್ಲಿಮರ ಕುರಿತು ಕೂಗಾಡುತ್ತಿದ್ದೀರಿ. ಇದು ಒಳ್ಳೆಯದಲ್ಲ ಎಂದು ಯಾದವ್ ಹೇಳಿದರು.

ವಾರಾಂತ್ಯದಲ್ಲಿ ಮೋದಿ ರಾಜಸ್ಥಾನದ ಬನ್ಸ್ವಾರಾದಲ್ಲಿ ಮಾಡಿದ್ದ ಭಾಷಣದ ವಿರುದ್ಧ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೋದಿಯವರ ಸುಳ್ಳುಗಳ ವಿರುದ್ಧ ದಾಳಿ ನಡೆಸಿದ್ದರೆ,ಮುಸ್ಲಿಮರನ್ನು ನಿಂದಿಸುವುದು ಪ್ರಧಾನಿಯ ಏಕೈಕ ಗ್ಯಾರಂಟಿಯಾಗಿದೆ ಎಂದು ಎಐಎಂಐಎಂ ವರಿಷ್ಠ ಅಸದುದ್ದೀನ್ ಉವೈಸಿ ಕುಟುಕಿದ್ದಾರೆ. ಎಸ್ಪಿ ಮುಖ್ಯಸ್ಥ ಅಖಿಲೇಶ ಯಾದವ ಅವರೂ ಮೋದಿಯವರ ಸುಳ್ಳುಗಳನ್ನು ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News