ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಂಎಸ್ಪಿಗೆ ಕಾನೂನು ಖಾತರಿ: ಖರ್ಗೆ

Update: 2024-02-13 15:42 GMT

                                                                                  ಮಲ್ಲಿಕಾರ್ಜುನ ಖರ್ಗೆ | Photo: X \  @kharge 

ರಾಯಪುರ : ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಇದು ನಮ್ಮ ಪಕ್ಷದ ಮೊದಲ ಗ್ಯಾರಂಟಿ ಎಂದು ಅವರು ಹೇಳಿದರು.

ಛತ್ತೀಸ್ ಗಡದ ಅಂಬಿಕಾಪುರ ಜಿಲ್ಲೆಯಲ್ಲಿ ನಡೆದ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಖರ್ಗೆ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿ ವಾಗ್ದಾಳಿ ನಡೆಸಿದ ಅವರು, ಮೋದಿ ಅವರ ಭರವಸೆಗಳನ್ನು ಜನರು ನಂಬಬಾರದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಹಾಗೂ ಅವರು ಅವರಿಗಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಖರ್ಗೆ ಪ್ರತಿಪಾದಿಸಿದರು. ಕಾಂಗ್ರೆಸ್ ಬಡವರ ಪಕ್ಷ. ಬಿಜೆಪಿ ಶ್ರೀಮಂತರ ಪಕ್ಷ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘‘ರೈತ ಸಹೋದರರಿಗೆ ಇಂದು ಚಾರಿತ್ರಿಕ ದಿನ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಪ್ರತಿಯೋರ್ವ ರೈತನ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ’’ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News