ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸಲಿ: ಸ್ಮೃತಿ ಇರಾನಿ ಪಂಥಾಹ್ವಾನ
ಹೊಸ ದಿಲ್ಲಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯು ಉತ್ತರ ಪ್ರದೇಶವನ್ನು ಪ್ರವೇಶಿಸಿದ್ದು, ಇದರ ಬೆನ್ನಿಗೇ ರಾಹುಲ್ ಗಾಂಧಿ ತಮ್ಮ ಹಿಂದಿನ ಕ್ಷೇತ್ರವಾದ ಅಮೇಥಿಯಿಂದ ಸ್ಪರ್ಧಿಸಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪಂಥಾಹ್ವಾನ ನೀಡಿದ್ದಾರೆ.
ಈ ಕುರಿತು NDTV ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಸ್ಮೃತಿ ಇರಾನಿ, "2019ರಲ್ಲಿ ಅವರು ಅಮೇಥಿಯನ್ನು ತೊರೆದರು. ಈಗ ಅಮೇಥಿ ಅವರನ್ನು ತೊರೆದಿದೆ. ಅವರಿಗೆ ಅಷ್ಟೊಂದು ವಿಶ್ವಾಸವಿದ್ದರೆ ತಮ್ಮ ಈಗಿನ ಕ್ಷೇತ್ರವಾದ ವಯನಾಡ್‌ನಲ್ಲಿ ಸ್ಪರ್ಧಿಸುವ ಬದಲು ಅಮೇಥಿಯಿಂದಲೇ ಸ್ಪರ್ಧಿಸಲಿ" ಎಂದು ಸವಾಲು ಒಡ್ಡಿದ್ದಾರೆ.
"ಅಮೇಥಿಯ ಖಾಲಿ ರಸ್ತೆಗಳು ರಾಹುಲ್ ಗಾಂಧಿಯ ಬಗ್ಗೆ ಅಲ್ಲಿನ ಜನರಿಗೆ ಯಾವ ಅಭಿಪ್ರಾಯವಿದೆ ಎಂಬುದನ್ನು ನಮಗೆ ಹೇಳುತ್ತಿವೆ" ಎಂದು ಅವರು ವ್ಯಂಗ್ಯವಾಡಿದ್ದಾರೆ.
ಸ್ಮೃತಿ ಇರಾನಿ ತಮ್ಮ ಕ್ಷೇತ್ರವಾದ ಅಮೇಥಿಗೆ ನಾಲ್ಕು ದಿನಗಳ ಭೇಟಿಗಾಗಿ ಆಗಮಿಸಿದ್ದು, ಅದರ ಭಾಗವಾಗಿ ಅಮೇಥಿಯಲ್ಲಿ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಮೇಥಿ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಎದುರು ರಾಹುಲ್ ಗಾಂಧಿ ಸುಮಾರು 55,000 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.