ಶಾಂತಿ ಮರುಸ್ಥಾಪನೆಗೆ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಲಿ : ‘ಇಂಡಿಯಾ’ ಆಗ್ರಹ

Update: 2024-12-06 15:52 GMT

 ನರೇಂದ್ರ ಮೋದಿ | PC : PTI 

ಹೊಸದಿಲ್ಲಿ : ಹಿಂಸಾಚಾರ ಪೀಡಿತ ಮಣಿಪುರಕ್ಕೆ ಅತಿ ಶೀಘ್ರವೇ ಭೇಟಿ ನೀಡುವಂತೆ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿವೆ. ಮಣಿಪುರದ ಜನತೆ ಜೊತೆ ಪ್ರಧಾನಿಯ ನೇರ ಭಾಗೀದಾರಿಕೆ ಹಾಗೂ ಕ್ರಿಯಾತ್ಮಕವಾದ ಮಾತುಕತೆಯಿಂದ ಮಾತ್ರವೇ ಆ ರಾಜ್ಯಕ್ಕೆ ಶಾಂತಿ ಹಾಗೂ ಸಹಜತೆ ಮರಳಲಿದೆ ಎಂದು ಅದು ಹೇಳಿದೆ.

ಇಂಡಿಯಾ ಮೈತ್ರಿಕೂಟವನ್ನು ಪ್ರತಿನಿಧಿಸುವ ಹತ್ತು ರಾಜಕೀಯ ಪಕ್ಷಗಳ ನಾಯಕರ ನಿಯೋಗವೊಂದು ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಮಣಿಪುರ ಹಿಂಸಾಚಾರದ ವಿರುದ್ಧ ಜಂತರ್ಮಂತರ್ನಲ್ಲಿ ಧರಣಿ ನಡೆಸುವುದಕ್ಕೆ ತಮಗೆ ಅನುಮತಿ ನೀಡಿಲ್ಲವೆಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ. ಮೇಘಚಂದ್ರ ಆಪಾದಿಸಿದ್ದಾರೆ. ಆದಾಗ್ಯೂ ತಮ್ಮ ಪ್ರತಿಭಟನೆಯು ವಿವಿಧ ರೂಪಗಳಲ್ಲಿ ಮುಂದುವರಿಯಲಿದೆ ಎಂದವರು ಹೇಳಿದ್ದಾರೆ.

‘‘ಮಣಿಪುರ ಕೂಡಾ ಭಾರತದ ಭಾಗವಾಗಿದೆ. ಆದರೂ ಕಳೆದ 18 ತಿಂಗಳುಗಳಲ್ಲಿ ಕೇಂದ್ರ ಸರಕಾರವು ಯಾಕೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿದೆ. 60 ಸಾವಿರಕ್ಕೂ ಅಧಿಕ ಮಂದಿ ಪರಿಹಾರ ಶಿಬಿರಗಳಲ್ಲಿದ್ದಾರೆ. ನೂರಾರು ಮಂದಿ ಹಿಂಸೆಗೆ ಬಲಿಯಾಗಿದ್ದಾರೆ. ಇನ್ನು ಎಷ್ಟು ಸಮಯದ ನಾವು ನರಳಬೇಕು’’ ಎಂದು ಮೇಘಚಂದ್ರ ಸರಕಾರವನ್ನು ಪ್ರಶ್ನಿಸಿದರು.

ಮಣಿಪುರ ಸರಕಾರವನ್ನು ಕೇಂದ್ರ ಸರಕಾರವು ನೇರವಾಗಿ ನಿಯಂತ್ರಿಸುತ್ತಿದೆ. ಅಲ್ಲಿ ಅಘೋಷಿತ ರಾಷ್ಟ್ಪಪತಿ ಆಳ್ವಿಕೆಯಿರುವ ಭಾವನೆಯುಂಟಾಗುತ್ತಿದೆ. ಕೇಂದ್ರ ಗೃಹ ಸಚಿವರು ರಾಜ್ಯದ ಪರಿಸ್ಥಿತಿಯನ್ನು ನೇರವಾಗಿ ನಿಯಂತ್ರಿಸುತ್ತಿದ್ದಾರೆ. ಮುಖ್ಯಮಂತ್ರಿಯವರು ಕಾಗದದ ಹುಲಿಯಷ್ಟೆ ಆಗಿದ್ದಾರೆಂದು ಅವರು ಆಪಾದಿಸಿದರು.

‘‘ಮಣಿಪುರ ಬಿಕ್ಕಟ್ಟು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ನಿರ್ಲಕ್ಷ್ಯದ ಪರಿಣಾಮವಾಗಿದೆ. ಪ್ರಧಾನಿಯವರು ಮಣಿಪುರದ ಪ್ರಸಕ್ತ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತಿಲ್ಲ, ಅಲ್ಲದೆ ಯಾವುದೇ ಪ್ರತಿನಿಧಿಗಳನ್ನು ಚರ್ಚೆಗೆ ಆಹ್ವಾನಿಸಿಲ್ಲ ’’ ಎಂದು ಮಣಿಪುರ ಕಾಂಗ್ರೆಸ್ ವರಿಷ್ಠ ರು ತಿಳಿಸಿದ್ದಾರೆ.

ಡಬಲ್ ಎಂಜಿನ್ ಬಿಜೆಪಿ ಸರಕಾರದ ದುರಾಡಳಿತದಿಂದಾಗಿ ಮಣಿಪುರವು ಈ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಸರಕಾರದಿಂದಾಗಿ ಮಣಿಪುರದ ಜನತೆ ವಿಭಜನೆಗೊಂಡಿದ್ದಾರೆ. ಇದಕ್ಕೆ ಕೊನೆಯಾಗಬೇಕಿದೆ . ನಾವು ಮತ್ತೊಮ್ಮೆ ಒಗ್ಗೂಡಬೇಕಾಗಿದೆ. ಮಣಿಪುರದ ಏಕತೆ ಹಾಗೂ ಸಮಗ್ರತೆಗೆ ನಾವು ಬದ್ಧರಾಗಿದ್ದೇವೆ ಎಂದು ಮೇಘಚಂದ್ರ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News