ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯನಿಗೆ ಮಸೀದಿ ಭೂಮಿ ಮಾರಾಟ!

Update: 2023-10-06 15:06 GMT

Photo : ndtv

ಅಯೋಧ್ಯೆ : ಶ್ರೀರಾಮ ಜನ್ಮಭೂಮಿ ತೀರ್ಥ ಕೇತ್ರದ ಕಾರ್ಯದರ್ಶಿಗೆ 30 ಲ.ರೂ.ಮೌಲ್ಯದ ಮಸೀದಿ ಜಮೀನನ್ನು ಮಾರಾಟ ವಂಚಿಸಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಅಯೋಧ್ಯೆ ಉಪಸಮಿತಿಯು ಆಗ್ರಹಿಸಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಮಸೀದಿಗೆ ಸೇರಿದ ಮತ್ತು ವಕ್ಫ್ ಆಸ್ತಿಯಾಗಿರುವ ಭೂಮಿಯ ಮಾರಾಟಕ್ಕೆ ಒಪ್ಪಂದದ ಆಧಾರದಲ್ಲಿ ಸೆ.1ರಂದು 15 ಲ.ರೂ.ಗಳ ಮುಂಗಡವನ್ನು ಪಾವತಿಸಿದ್ದಾರೆ ಎಂದು ಅಯೋಧ್ಯೆ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅದು ವಕ್ಫ್ ಆಸ್ತಿ, ಅದು ಚರಾಸ್ತಿಯಾಗಿರಲಿ ಅಥವಾ ಸ್ಥಿರಾಸ್ತಿಯಾಗಿರಲಿ, ಅಲ್ಲಾಹನ ಒಡೆತನಕ್ಕೆ ನಿಯೋಜಿಸಲಾದ ಶಾಶ್ವತ ದತ್ತಿಯಾಗಿದೆ. ಇಂತಹ ಆಸ್ತಿಯನ್ನು ಮಾರಾಟ ಮಾಡಲು ವಕ್ಫ್ ಮಂಡಳಿಗೂ ಅಧಿಕಾರವಿಲ್ಲ. ಈ ಹೇಯ ಕೃತ್ಯದ ಬಗ್ಗೆ ಮುಸ್ಲಿಮರಲ್ಲಿ ಅಪಾರ ಸಿಟ್ಟು ತುಂಬಿದೆ ಎಂದು ಹೇಳಿದೆ.

ಅಯೋಧ್ಯೆ ಪಂಜಿ ತೋಲಾ ಶೆಹೆರ್ ಅಡಿಯ ಈ ಮಸೀದಿಯನ್ನು ವಕ್ಫ್ ಆಸ್ತಿಯೆಂದು ಗಝೆಟಿನಲ್ಲಿ ಅಧಿಸೂಚಿಸಲಾಗಿದೆ. ರಾಮ ಪಥದ ಅಗಲೀಕರಣಕ್ಕಾಗಿ ಈ ಆಸ್ತಿಯ ಭಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಉಳಿದ ಭಾಗವನ್ನು ನವೀಕರಿಸಲಾಗಿದ್ದು, ದಿನಕ್ಕೆ ಐದು ಬಾರಿ ನಮಾಝ್ ಸಲ್ಲಿಸಲು ಅದನ್ನು ಬಳಸಲಾಗುತ್ತಿದೆ.

ಅಯೋಧ್ಯೆಯಲ್ಲಿರುವ ಇಂತಹ ಸುಮಾರು 250 ವಕ್ಫ್ ಆಸ್ತಿಗಳಿಗೆ ಮುತವಲ್ಲಿ (ಉಸ್ತುವಾರಿ) ಇಲ್ಲ. ಇವು ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿಯ ದೇಖರೇಖಿಯಡಿ ಇವೆ. ಆದರೂ ಆ ಪ್ರದೇಶದ ನಿವಾಸಿಗಳಾದ ರಯೀಸ್ ಅಹ್ಮದ್ ಮತ್ತು ನೂರ್ ಆಲಮ್ ಅವರು ಹೇಗೋ ತಮ್ಮನ್ನೇ ಉಸ್ತುವಾರಿಗಳು ಎಂದು ತೋರಿಸಿಕೊಂಡು ಮಸೀದಿ ಭೂಮಿಯ ಮಾರಾಟಕ್ಕೆ ತೀರ್ಥಕ್ಷೇತ್ರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ಅಯೋಧ್ಯೆ ಉಪಸಮಿತಿಯ ಅಧ್ಯಕ್ಷ ಮುಹಮ್ಮದ್ ಅಝಂ ಖಾದ್ರಿ ತಳಿಸಿದರು.

‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರವನ್ನೊಳಗೊಂಡ ನೋಂದಣಿಗಳು ನೋಂದಣಿ ಕಚೇರಿಯ ಬದಲಾಗಿ ಟ್ರಸ್ಟಿನ ಕಚೇರಿಯಲ್ಲಿ ನಡೆಯುತ್ತವೆ. ಹೀಗಾಗಿ ವಿಷಯವು ತಡವಾಗಿ ನಮ್ಮ ಗಮನಕ್ಕೆ ಬಂದಿದೆ ’ಎಂದು ತಿಳಿಸಿದ ಅವರು,‘ಕೆಲವು ದುಷ್ಕೃತ್ಯಗಳು ನಡೆಯುತ್ತಿವೆ ಎಂಬ ವದಂತಿಗಳನ್ನು ನಾವು ಕೇಳಿದ್ದೇವಾದರೂ ಅದರಲ್ಲಿ ಭಾಗಿಯಾಗಿದ್ದವರು ನಿರಾಕರಿಸುತ್ತಲೇ ಇದ್ದರು. ಇದಕ್ಕೆ ಕಾರಣರಾದವರಿಂದ ಸ್ಪಷ್ಟ ಉತ್ತರಗಳು ಸಿಗದಿದ್ದಾಗ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಮಂಡಳಿಯು ನಿರ್ಧರಿಸಿತ್ತು. ಇದಕ್ಕೆ ಅನುಸರಣೆಯಾಗಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಅಹವಾಲು ಸಲ್ಲಿಸಲಾಗಿದೆ ’ಎಂದ ಖಾದ್ರಿ,‘ನಮ್ಮ ಸಮುದಾಯದವರೇ ಈ ಕೃತ್ಯವನ್ನೆಸಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ನಾವು ಆಗ್ರಹಿಸುತ್ತಿದ್ದೇವೆ. ಚಂಪತ್ ರಾಯ್ ಅವರನ್ನು ನಾವು ದೂರುವುದಿಲ್ಲ ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News