ಲೋಕಸಭಾ ಚುನಾವಣೆ 2024 | ಡಿಎಂಕೆ ನೇತೃತ್ವದ ಮೈತ್ರಿಕೂಟದಡಿ ತಮಿಳನಾಡಿನ 9, ಪುದುಚೇರಿಯ ಒಂದು ಕ್ಷೇತ್ರಗಳಿಂದ ಕಾಂಗ್ರೆಸ್ ಸ್ಪರ್ಧೆ
ಚೆನ್ನೈ : ಡಿಎಂಕೆ ನೇತೃತ್ವದ ಮೈತ್ರಿಕೂಟದಡಿ ಸ್ಥಾನ ಹಂಚಿಕೆ ಮಾತುಕತೆಗಳು ಸೋಮವಾರ ಅಂತಿಮಗೊಂಡಿದ್ದು, 39 ಲೋಕಸಭಾ ಸ್ಥಾನಗಳ ಪೈಕಿ ತಮಿಳುನಾಡಿನ ಒಂಭತ್ತು ಮತ್ತು ಪುದುಚೇರಿಯ ಒಂದು ಸ್ಥಾನಗಳಿಗೆ ಕಾಂಗ್ರೆಸ್ ಸ್ಪರ್ಧಿಸಲಿದೆ.
2019ರಲ್ಲಿ ತಾನು ಸ್ಪರ್ಧಿಸಿದ್ದ ತಮಿಳುನಾಡಿನ ಒಂಭತ್ತು ಕ್ಷೇತ್ರಗಳ ಪೈಕಿ ಆರನ್ನು ಕಾಂಗ್ರೆಸ್ ಮರಳಿ ಪಡೆದಿದೆ. ಅದು ತಿರುವಲ್ಲೂರು (ಎಸ್ಸಿ),ಶಿವಗಂಗಾ,ಕೃಷ್ಣಗಿರಿ,ಕರೂರ್, ವಿರುಧುನಗರ ಮತ್ತು ಕನ್ಯಾಕುಮಾರಿಗಳಿಂದ ಮತ್ತೆ ಕಣಕ್ಕಿಳಿಯಲಿದೆ. ಕುಡ್ಡಲೂರು, ಮಾಯಿಲಡತುರೈ ಮತ್ತು ತಿರುನೆಲ್ವೇಲಿ ಅದಕ್ಕೆ ಹೊಸದಾಗಿ ದಕ್ಕಿರುವ ಲೋಕಸಭಾ ಕ್ಷೇತ್ರಗಳಾಗಿವೆ. ಕಾಂಗ್ರೆಸ್ 2019ರಲ್ಲಿ ಗೆದ್ದಿದ್ದ ಪುದುಚೇರಿ ಕ್ಷೇತ್ರವನ್ನು ಅದಕ್ಕೇ ಬಿಟ್ಟುಕೊಡಲಾಗಿದೆ.
2019ರ ಲೋಕಸಭಾ ಚುನಾವಣೆಗಳಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು 39ರಲ್ಲಿ 38 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಮೈತ್ರಿಕೂಟದ ಭಾಗವಾಗಿದ್ದ ಕಾಂಗ್ರೆಸ್ ಸ್ಪರ್ಧಿಸಿದ್ದ ಒಂಬತ್ತು ಕ್ಷೇತ್ರಗಳ ಪೈಕಿ ಎಂಟನ್ನು ಗೆದ್ದುಕೊಂಡಿತ್ತು. ಬಿಜೆಪಿ ನೇತೃತ್ವದ ಎನ್ ಡಿ ಎ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಆಡಳಿತಾರೂಢ ಡಿಎಂಕೆ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಎಂಡಿಎಂಕೆ, ಐಯುಎಂಎಲ್ ಮತ್ತು ಕೆಎಂಡಿಕೆ (ಡಿಎಂಕೆ ಚಿಹ್ನೆ)ಗೆ ತಲಾ ಒಂದು ಕ್ಷೇತ್ರ ಹಾಗೂ ವಿಸಿಕೆ, ಸಿಪಿಎಂ, ಸಿಪಿಐಗೆ ತಲಾ ಎರಡು ಕ್ಷೇತ್ರಗಳನ್ನು ನೀಡಲಾಗಿದೆ.
ಕಾಂಗ್ರೆಸ್ ಮತ್ತು ಡಿಎಂಕೆ ಇಂಡಿಯಾ ಮೈತ್ರಿಕೂಟದ ಭಾಗವಾಗಿವೆ.