ಲೋಕಸಭಾ ಚುನಾವಣೆ | ಕೇರಳದಲ್ಲಿ 16 ಸ್ಥಾನಗಳಿಗೆ ಕಾಂಗ್ರೆಸ್ ಸ್ಪರ್ಧೆ, ಶೀಘ್ರ ಅಭ್ಯರ್ಥಿಗಳ ಪಟ್ಟಿ ಪ್ರಕಟ
ತಿರುವನಂತಪುರ: ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಕೇರಳದ 16 ಸ್ಥಾನಗಳಿಗೆ ತಾನು ಸ್ಪರ್ಧಿಸುತ್ತಿದ್ದು, ಪ್ರತಿಪಕ್ಷ ಯುಡಿಎಫ್ನಲ್ಲಿ ಸ್ಥಾನ ಹಂಚಿಕೆಯನ್ನು ಅಂತಿಮಗೊಳಿಸಲಾಗಿದೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ. ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರ ಪ್ರಕಟಿಸುವುದಾಗಿ ಅದು ತಿಳಿಸಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ ಯುಡಿಎಫ್ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಅವರು, ಮೈತ್ರಿಕೂಟದ ಎರಡನೇ ಅತಿ ದೊಡ್ಡ ಪಾಲುದಾರ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್) ಹಿಂದಿನಂತೆ ಮಲಪ್ಪುರಂ ಮತ್ತು ಪೊನ್ನಾನಿ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿದೆ. ಕೇರಳ ಕಾಂಗ್ರೆಸ್ (ಜೆ) ಕೊಟ್ಟಾಯಂ ಮತ್ತು ಆರ್ಎಸ್ಪಿ ಕೊಲ್ಲಂ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂದರು. ಕೇರಳ 20 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.
ತಾವು ಈ ಸಲ ಹೆಚ್ಚುವರಿಯಾಗಿ ಇನ್ನೊಂದು ಕ್ಷೇತ್ರವನ್ನು ಕೇಳಿದ್ದೇವೆ ಮತ್ತು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಐಯುಎಂಎಲ್ ಇತ್ತೀಚಿಗೆ ಸಷ್ಟಪಡಿಸಿತ್ತು.
ಸ್ಥಾನ ಹಂಚಿಕೆ ಚರ್ಚೆಗಳ ಸಂದರ್ಭ ಐಯುಎಂಎಲ್ ಮೂರನೇ ಕ್ಷೇತ್ರಕ್ಕಾಗಿ ಬೇಡಿಕೆಯನ್ನು ಮಂಡಿಸಿತ್ತು ಎನ್ನುವುದನ್ನು ಒಪ್ಪಿಕೊಂಡ ಸತೀಶನ್, ಅದು ಇನ್ನೊಂದು ಕ್ಷೇತ್ರವನ್ನು ಪಡೆಯಲು ಅರ್ಹವಾಗಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಅಭಿಪ್ರಾಯವೂ ಆಗಿದೆ. ಆದರೆ ಪ್ರಸಕ್ತ ಸನ್ನಿವೇಶಗಳಲ್ಲಿ ಹೆಚ್ಚು ಸ್ಥಾನಗಳನ್ನು ಹಂಚಿಕೆ ಮಾಡುವುದು ಕಷ್ಟವಾಗುತ್ತದೆ ಎಂದು ಐಯುಎಂಎಲ್ ನಾಯಕತ್ವಕ್ಕೆ ಮನವರಿಕೆ ಮಾಡಲಾಗಿದೆ. ಬದಲಿಗೆ ಮುಂದೆ ತೆರವಾಗುವ ರಾಜ್ಯಸಭಾ ಸ್ಥಾನವನ್ನು ಐಯುಎಂಎಲ್ ಗೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿಸಿದರು.
ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸತೀಶನ್ ಮತ್ತು ರಾಜ್ಯ ಕಾಂಗೆಸ್ ಅಧ್ಯಕ್ಷ ಕೆ.ಸುಧಾಕರನ್ ಅವರು ಶೀಘ್ರ ದಿಲ್ಲಿಗೆ ತೆರಳಿದ್ದಾರೆ ಮತ್ತು ಅಭ್ಯರ್ಥಿಗಳ ಹೆಸರುಗಳನ್ನು ಅಲ್ಲಿ ಪ್ರಕಟಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿದವು.