ಲೋಕಸಭಾ ಚುನಾವಣೆ| ಸಿ-ವಿಜಿಲ್ ಆ್ಯಪ್ ಮೂಲಕ ನೀತಿ ಸಂಹಿತೆ ಉಲ್ಲಂಘನೆಯ 79,000ಕ್ಕೂ ಅಧಿಕ ದೂರುಗಳು ದಾಖಲು: ಚುನಾವಣಾ ಆಯೋಗ
ಹೊಸದಿಲ್ಲಿ: ತನ್ನ ಸಿ-ವಿಜಿಲ್ ಮೊಬೈಲ್ ಆ್ಯಪ್ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗಳತ್ತ ಗಮನ ಸೆಳೆಯಲು ಜನರ ಕೈಯ್ಯಲ್ಲಿರುವ ಪರಿಣಾಮಕಾರಿ ಸಾಧನವಾಗಿದೆ ಎಂದು ಶುಕ್ರವಾರ ಹೇಳಿರುವ ಚುನಾವಣಾ ಆಯೋಗವು, ಲೋಕಸಭಾ ಚುನಾವಣೆಯ ಘೋಷಣೆಯ ಬಳಿಕ ಈವರೆಗೆ 79,000ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ.
ಶೇ.99ಕ್ಕೂ ಅಧಿಕ ದೂರುಗಳನ್ನು ಬಗೆಹರಿಸಲಾಗಿದೆ ಮತ್ತು ಈ ಪೈಕಿ ಶೇ.89ರಷ್ಟು ದೂರುಗಳನ್ನು 100 ನಿಮಿಷಗಳೊಳಗೆ ಇತ್ಯರ್ಥಗೊಳಿಸಲಾಗಿದೆ ಎಂದು ಆಯೋಗವು ಹೇಳಿದೆ.
58,500ಕ್ಕೂ ಅಧಿಕ ದೂರುಗಳು (ಒಟ್ಟು ದೂರುಗಳ ಶೇ.73) ಅಕ್ರಮ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳ ವಿರುದ್ಧವಾಗಿದ್ದರೆ,1,400ಕ್ಕೂ ಅಧಿಕ ದೂರುಗಳು ಹಣ, ಉಡುಗೊರೆ ಮತ್ತು ಮದ್ಯ ವಿತರಣೆಗೆ ಸಂಬಂಧಿಸಿವೆ. ಸುಮಾರು ಶೇ.3ರಷ್ಟು (2,454) ದೂರುಗಳು ಆಸ್ತಿ ಹಾನಿಯ ವಿರುದ್ಧ ಸಲ್ಲಿಕೆಯಾಗಿವೆ ಎಂದು ತಿಳಿಸಿರುವ ಆಯೋಗವು, ಬಂದೂಕುಗಳ ಪ್ರದರ್ಶನ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ 535 ದೂರುಗಳು ದಾಖಲಾಗಿದ್ದು, ಈ ಪೈಕಿ 529 ದೂರುಗಳನ್ನು ಪರಿಹರಿಸಲಾಗಿದೆ. ಅನುಮತಿಸಲಾದ ಸಮಯವನ್ನು ಮೀರಿ ಸ್ಪೀಕರ್‌ಗಳ ಬಳಕೆಗೆ ಸಂಬಂಧಿಸಿದ ದೂರುಗಳು ಸೇರಿದಂತೆ ನಿಗದಿತ ಅವಧಿಯನ್ನು ಮೀರಿ ಪ್ರಚಾರ ನಡೆಸಿದ್ದಕ್ಕಾಗಿ ಒಟ್ಟು 1,000 ದೂರುಗಳು ದಾಖಲಾಗಿವೆ ಎಂದು ಹೇಳಿದೆ.
ಲೋಕಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಅವರು, ಜಾಗ್ರತರಾಗಿರುವಂತೆ ಮತ್ತು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಳು ಹಾಗು ಮತದಾರರಿಗೆ ಯಾವುದೇ ರೀತಿಯ ಆಮಿಷಗಳ ಕುರಿತು ವರದಿ ಮಾಡಲು ಸಿ-ವಿಜಿಲ್ ಆ್ಯಪ್ ಬಳಸುವಂತೆ ನಾಗರಿಕರನ್ನು ಆಗ್ರಹಿಸಿದ್ದರು ಎಂದು ಚುನಾವಣಾ ಆಯೋಗವು ಬೆಟ್ಟು ಮಾಡಿದೆ.