ಲೋಕಸಭಾ ಚುನಾವಣೆ | ನಾಳೆ 6ನೇ ಹಂತದ ಮತದಾನ
ಹೊಸದಿಲ್ಲಿ : ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಶನಿವಾರ ನಡೆಯಲಿದೆ. ಈ ಹಂತದಲ್ಲಿ ದೇಶಾದ್ಯಂತ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, 11 ಕೋಟಿಗೂ ಅಧಿಕ ಮತದಾರರು 889 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಮತದಾನ ನಡೆಯಲಿರುವ 58 ಕ್ಷೇತ್ರಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್-ರಜೌರಿ ಕ್ಷೇತ್ರವೂ ಒಂದಾಗಿದೆ. ಅಲ್ಲಿ ಮತದಾನ ಮೂರನೇ ಹಂತದಲ್ಲಿ ನಡೆಯಬೇಕಾಗಿತ್ತು. ಆದರೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾಗಾಟ ಸಮಸ್ಯೆ ತಲೆದೋರಿದ ಬಳಿಕ ಅಲ್ಲಿನ ಮತದಾನವನ್ನು ಆರನೇ ಹಂತಕ್ಕೆ ಮುಂದೂಡಲಾಗಿತ್ತು.
ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಚಂಡಮಾರುತದ ಪರಿಣಾಮಗಳು ಇರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ಎಂದು ಶುಕ್ರವಾರ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಚುನಾವಣಾ ಆಯೋಗವು ಹೇಳಿದೆ.
ಆರನೇ ಹಂತದ ಮತದಾನದಲ್ಲಿ ಒಡಿಶಾದ ಕೆಲವು ಲೋಕಸಭಾ ಮತ್ತು ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕೆಲವು ಲೋಕಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ.
11.13 ಕೋಟಿಗೂ ಅಧಿಕ ಮತದಾರರು ಶನಿವಾರ ತಮ್ಮ ಮತಾಧಿಕಾರವನ್ನು ಚಲಾಯಿಸಲಿದ್ದಾರೆ. ಈ ಪೈಕಿ 5.84 ಕೋಟಿ ಮಂದಿ ಪುರುಷರು, 5.29 ಕೋಟಿ ಮಂದಿ ಮಹಿಳೆಯರು ಮತ್ತು 5,120 ಮಂದಿ ತೃತೀಯ ಲಿಂಗಿಗಳು.
ಶನಿವಾರ ಮತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವಂತೆ ದಿಲ್ಲಿ, ಗುರುಗ್ರಾಮ ಮತ್ತು ಫರೀದಾಬಾದ್ ಮುಂತಾದ ನಗರ ಪ್ರದೇಶಗಳ ಮತದಾರರಿಗೆ ಮನವಿ ಮಾಡಿದೆ.
ಕೊನೆಯ ಹಂತದ ಮತದಾನವು ಜೂನ್ 1ರಂದು ನಡೆಯಲಿದೆ. ಅಂದು 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ಮೊದಲ ಐದು ಹಂತಗಳ ಚುನಾವಣೆಯಲ್ಲಿ, 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾನ ಪೂರ್ಣಗೊಂಡಿದೆ. ಈವರೆಗೆ, ಒಟ್ಟಾರೆ 428 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.