ಲೋಕಸಭಾ ಚುನಾವಣೆ 2024; 23 ಸ್ಥಾನಗಳಿಗೆ ಸ್ಪರ್ಧೆ ಖಚಿತ: ಸಂಜಯ್ ರಾವತ್
ನಾಸಿಕ್: ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ 23ಕ್ಕೆ ತಮ್ಮ ಪಕ್ಷ ಸ್ಪರ್ಧಿಸುವುದು ಖಚಿತ ಎಂದು ಶಿವನೇನೆ (ಯುಬಿಟಿ) ಮುಖಂಡ ಸಂಜಯ್ ರಾವುತ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಮಹಾ ವಿಕಾಸ ಅಘಾಡಿಯ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್ ಸಿಪಿಗೆ 25 ಸ್ಥಾನಗಳಷ್ಟೇ ಉಳಿದಿವೆ.
ನಾಸಿಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಳಮಟ್ಟದಲ್ಲಿ ಪಕ್ಷ ಹೊಂದಿದ ಬಲ ಮತ್ತು ಕ್ಷೇತ್ರಗಳ ಗೆಲುವಿನ ಸಾಧ್ಯತೆಯ ಆಧಾರದಲ್ಲಿ 23 ಕ್ಷೇತ್ರಗಳಿಗೆ ಸ್ಪರ್ಧಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದರು.
ಎಂವಿಎ ಪಾಲುದಾರ ಪಕ್ಷಗಳ ಸ್ಥಾನ ಹೊಂದಾಣಿಕೆ ಮಾತುಕತೆಗಳು ಗುರುವಾರ ನಡೆಯಲಿವೆ ಎಂದು ರಾವುತ್ ಸ್ಪಷ್ಟಪಡಿಸಿದರು. ವಂಚಿತ್ ಬಹುಜನ ಅಘಾಡಿ ವಿಚಾರವೂ ಸೇರಿದಂತೆ ಎಲ್ಲ ವಿಷಯಗಳನ್ನು ಚರ್ಚಿಸಲಾಗುವುದು. ಗುರುವಾರದ ಸಭೆಗೆ ವಿಬಿಎ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರನ್ನೂ ಆಹ್ವಾನಿಸಲಾಗುವುದು ಎಂದು ವಿವರಿಸಿದರು.
ವಿರೋಧ ಪಕ್ಷಗಳ ನಾಯಕರ ವಿರುದ್ಧ ಕೇಂದ್ರ ಏಜೆನ್ಸಿಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಕೇಂದ್ರದ ಕ್ರಮವನ್ನು ಟೀಕಿಸಿದ ಅವರು, ಕೇಸರಿ ಪಕ್ಷದ ವಿರುದ್ಧ ಹೋರಾಡುತ್ತಿರುವ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯದಂಥ ವ್ಯವಸ್ಥೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಎನ್ ಸಿಪಿ ಪವಾರ್ ಬಣದ ಶಾಸಕ ರೋಹಿತ್ ಪವಾರ್ ಮತ್ತು ಇತರ ವಿರೋಧ ಪಕ್ಷಗಳ ನಾಯಕರ ವಿರುದ್ಧದ ತನಿಖೆ ಇದರ ಭಾಗ ಎಂದು ಆಪಾದಿಸಿದರು.