ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಕಾನೂನು ಜಾರಿಗೆ ತರಲಿದೆ: ಅಮಿತ್ ಶಾ ಆರೋಪ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಅದು ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಕಾನೂನು ಜಾರಿಗೆ ತರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರಲ್ಲದೆ ದೇಶವು ಶರಿಯಾ ಆಧಾರಲ್ಲಿ ನಡೆಯಬೇಕೇ ಎಂದು ಪ್ರಶ್ನಿಸಿದರು.
ಛತ್ತೀಸಗಢದ ಬೆಮೆತಾರಾ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದರು. ರಾಮ ಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿದವರಿಗೆ ಈ ದೇಶವನ್ನು ಆಳುವ ಹಕ್ಕಿಲ್ಲ ಎಂದು ಅವರು ಹೇಳಿದರು.
“ಅವರು(ಕಾಂಗ್ರೆಸ್) ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಕಾನೂನು ಮಾಡುವುದಾಗಿ ಹೇಳಿದ್ದಾರೆ. ದೇಶ ಶರಿಯಾ ಆಧಾರದಲ್ಲಿ ನಡೆಯಬೇಕೇ? ತ್ರಿವಳಿ ತಲಾಕ್ ಮತ್ತೆ ಜಾರಿಯಾಗಬೇಕೇ, ಕಾಂಗ್ರೆಸ್ ಪಕ್ಷವು ಮುಸ್ಲಿಂ ಲೀಗ್ ಅಜೆಂಡಾ ಮುಂದುವರಿಸುತ್ತಿದೆ,” ಎಂದು ಅವರು ಹೇಳಿದರು.
“ರಾಹುಲ್ ಬಾಬಾ, ಜನರು ನಿಮ್ಮನ್ನು ಆಯ್ಕೆ ಮಾಡುವುದೂ ಇಲ್ಲ, ತ್ರಿವಳಿ ತಲಾಕ್ ಜಾರಿಯಾಗುವುದೂ ಇಲ್ಲ. ಯಾರಿಗೂ ಸಿಎಎ, ತ್ರಿವಳಿ ತಲಾಕ್ ಕಾನೂನು ಮುಟ್ಟಲು ಮತ್ತು ವಿಧಿ 370 ರದ್ದತಿ ಮುಟ್ಟಲು ಬಿಡುವುದಿಲ್ಲ,” ಎಂದು ಅವರು ಹೇಳಿದರು.