ತನ್ನ ಮಂದಿರ ನಿರ್ಮಿಸಲು ಶ್ರೀ ರಾಮನೇ ಪ್ರಧಾನಿ ಮೋದಿಯನ್ನು ಆರಿಸಿದ್ದಾನೆ: ಎಲ್‌.ಕೆ. ಅಡ್ವಾಣಿ

Update: 2024-01-13 09:48 GMT

ಎಲ್‌ ಕೆ ಅಡ್ವಾಣಿ (PTI)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ರಾಮ ದೇವರ ಅನನ್ಯ ಭಕ್ತರಾಗಿದ್ದಾರೆ ಎಂದು ಹೇಳಿರುವ ಹಿರಿಯ ಬಿಜೆಪಿ ನಾಯಕ ಎಲ್‌ ಕೆ ಅಡ್ವಾಣಿ, ತಾನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜನಬೆಂಬಲ ಪಡೆಯಲು ಸೆಪ್ಟೆಂಬರ್‌ 25, 1990 ರಂದು ಆರಂಭಗೊಂಡ “ರಾಮ ರಥ ಯಾತ್ರೆಯ ಸಾರಥಿ ಮಾತ್ರ” ಎಂದು ಹೇಳಿದ್ದಾರೆ.

ಆರೆಸ್ಸೆಸ್‌ ಬೆಂಬಲಿತ ಹಿಂದಿ ನಿಯತಕಾಲಿಕ ʼರಾಷ್ಟ್ರ ಧರ್ಮʼಕ್ಕೆ ನೀಡಿದ ಸಂದರ್ಶನದಲ್ಲಿ ಅಡ್ವಾಣಿ ಮಾತನಾಡಿದ್ದಾರೆ. ತಾವು 33 ವರ್ಷಗಳ ಹಿಂದೆ ನಡೆಸಿದ ರಾಮ ರಥ ಯಾತ್ರೆಯು ತಮ್ಮ ರಾಜಕೀಯ ಪಯಣದ ಅತ್ಯಂತ ನಿರ್ಣಾಯಕ ಮತ್ತು ಪರಿವರ್ತನೆ ತಂದ ಯಾತ್ರೆಯಾಗಿತ್ತು, ಇದು ತಮಗೆ “ಭಾರತವನ್ನು ಮರುಅನ್ವೇಷಿಸಲು ಮತ್ತು ಈ ಪ್ರಕ್ರಿಯೆಯನ್ನು ಸ್ವಯಂ ಅನುಭೂತಿಗೆ ಸಹಕಾರಿಯಾಯಿತು,” ಎಂದು ಅವರು ಹೇಳಿದ್ದಾರೆ.

“ಇಂದು ರಥ ಯಾತ್ರೆಗೆ 33 ವರ್ಷ ಪೂರ್ಣಗೊಂಡಿದೆ. ಸೆಪ್ಟೆಂಬರ್‌ 25, 1990 ರಂದು ಬೆಳಿಗ್ಗೆ ಈ ಯಾತ್ರೆ ಆರಂಭಿಸಿದ್ದೆವು. ನಾವು ಶ್ರೀರಾಮನ ಮೇಲೆ ನಂಬಿಕೆಯಿರಿಸಿ ನಡೆಸಿದ ಯಾತ್ರೆಯು ದೇಶದಲ್ಲಿ ಆಂದೋಲನದ ರೂಪ ಪಡೆಯುವುದು ಎಂದು ನಮಗೆ ತಿಳಿದಿರಲಿಲ್ಲ,” ಎಂದು ಅಡ್ವಾಣಿ ಹೇಳಿದರು.

ಆಗ ತಮ್ಮ ಸಹಾಯಕರಾಗಿದ್ದ ಮೋದಿ, ರಥ ಯಾತ್ರೆ ಸಂದರ್ಭ ಹೆಚ್ಚು ಖ್ಯಾತಿ ಪಡೆದಿರಲಿಲ್ಲ ಎಂದು ಅಡ್ವಾಣಿ ಹೇಳಿದ್ದಾರೆ. ರಥ ಯಾತ್ರೆಯುದ್ದಕ್ಕೂ ಮೋದಿ ಅವರು ಅಡ್ವಾಣಿ ಜೊತೆಗಿದ್ದರು. ಆ ಕ್ಷಣದಲ್ಲಿಯೇ “ಶ್ರಿ ರಾಮನು ತನ್ನ ಪರಮ ಭಕ್ತ ಮೋದಿ ಅವರನ್ನು ಅಯೋಧ್ಯೆಯಲ್ಲಿ ಈ ದೇವಳ ನಿರ್ಮಿಸಲು ಆರಿಸಿದ್ದ,” ಎಂದು ಅಡ್ವಾಣಿ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ಅವರನ್ನೂ ತಮ್ಮ ಸಂದರ್ಶನದಲ್ಲಿ ಅಡ್ವಾಣಿ ನೆನಪಿಸಿಕೊಂಡರು.

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಧಾನಿ ರಾಮ ಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಅವರು ದೇಶದ ಪ್ರತಿ ನಾಗರಿಕನನ್ನು ಪ್ರತಿನಿಧಿಸುತ್ತಾರೆ ಎಂದು ಅಡ್ವಾಣಿ ಹೇಳಿದರು.

“ರಾಮ ಮಂದಿರ್‌ ನಿರ್ಮಾಣ್‌, ಏಕ್‌ ದಿವ್ಯ ಸ್ವಪ್ನಾ ಕಿ ಪೂರ್ತಿ” ಎಂಬ ಶೀರ್ಷಿಕೆಯ ಈ ಲೇಖನವು ನಿಯತಕಾಲಿಕದ ಜನವರಿ 16ರ ಸಂಚಿಕೆಯಲ್ಲಿ ಪ್ರಕಟವಾಗಲಿದ್ದು, ಅದರ ಪ್ರತಿಗಳನ್ನು ಅಯ್ಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಸಮಾರಂಭದಲ್ಲಿ ಭಾಗವಹಿಸುವ ಎಲ್ಲರಿಗೂ ಹಂಚಲಾಗುವುದು ಎಂದು ತಿಳಿದು ಬಂದಿದೆ.

96 ವರ್ಷದ ಅಡ್ವಾಣಿ ಅವರು ಜನವರಿ 22ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ವಿಹಿಂಪ ಹೇಳಿದರೂ, ಅಡ್ವಾಣಿ ಅವರ ಪ್ರಯಾಣ ಕುರಿತು ಈ ಹಂತದಲ್ಲಿ ಯಾವುದೇ ದೃಢೀಕರಣ ನೀಡಲಾಗದು ಎಂದು ಅವರ ಸಮೀಪವರ್ತಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News