ಶಿರೂರು ಭೂಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಗೆ ಸಾವಿರಾರು ಮಂದಿಯಿಂದ ಅಂತಿಮ ನಮನ
ಕೋಯಿಕ್ಕೋಡ್ : ಶಿರೂರು ಭೂಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಗೆ ಶನಿವಾರ ಅವರ ಸ್ವಗ್ರಾಮವಾದ ಕನ್ನಡಿಕ್ಕಲ್ ನಲ್ಲಿ ಸಾವಿರಾರು ಮಂದಿ ಅಂತಿಮ ನಮನ ಸಲ್ಲಿಸಿದರು.
ಜುಲೈ ತಿಂಗಳಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಅರ್ಜುನ್ ಹಾಗೂ ಅವರು ಚಲಾಯಿಸುತ್ತಿದ್ದ ಲಾರಿ ನಾಪತ್ತೆಯಾಗಿತ್ತು. ಈ ಘಟನೆ ನಡೆದ ಎರಡು ತಿಂಗಳಿಗೂ ಹೆಚ್ಚು ಕಾಲದ ನಂತರ ನಡೆದಿದ್ದ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ಬುಧವಾರವಷ್ಟೇ ಅರ್ಜುನ್ ಮೃತ ದೇಹ ಹಾಗೂ ಅವರು ಚಲಾಯಿಸುತ್ತಿದ್ದ ಲಾರಿ ಪತ್ತೆಯಾಗಿತ್ತು.
ಚಾಲಕ ಅರ್ಜುನ್ ಕಳೇಬರವನ್ನು ಹೊತ್ತ ಆ್ಯಂಬುಲೆನ್ಸ್ ಕನ್ನಡಿಕ್ಕಲ್ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೆ ಗ್ರಾಮಸ್ಥರು, ಅರ್ಜುನ್ ಸ್ನೇಹಿತರು, ನೆರೆಹೊರೆಯವರು ಹಾಗೂ ಚಾಲಕರು ದುಃಖತಪ್ತರಾದರು. ಅರ್ಜುನ್ ಮೃತದೇಹವನ್ನು ಅವರ ಸ್ವಗೃಹದೆದುರು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಜನರು ಅವರಿಗೆ ತಮ್ಮ ಅಂತಿಮ ನಮನ ಸಲ್ಲಿಸಿದರು.
ಅರ್ಜುನ್ ಮೃತದೇಹದ ಪತ್ತೆಯೊಂದಿಗೆ ಶಿರೂರು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 16ರಂದು ಸಂಭವಿಸಿದ್ದ ಶಿರೂರು ಭೂಕುಸಿತದಲ್ಲಿ ಸಿಲುಕಿಕೊಂಡಿದ್ದ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆಯು ಪ್ರತಿಕೂಲ ಹವಾಮಾನದ ಕಾರಣ 71 ದಿನಗಳ ಕಾಲ ವಿಳಂಬಗೊಂಡಿತ್ತು.