ಮಧ್ಯಪ್ರದೇಶ | ನವರಾತ್ರಿಯ ಸಂದರ್ಭದಲ್ಲಿ ಪೆಂಡಾಲ್ ಪ್ರವೇಶಿಸುವುದಕ್ಕೂ ಮುನ್ನ ಗಾರ್ಬಾ ನೃತ್ಯಗಾರರು ಗೋಮೂತ್ರ ಸೇವಿಸಬೇಕು: ವಿವಾದ ಸೃಷ್ಟಿಸಿದ ಬಿಜೆಪಿ ನಾಯಕನ ಹೇಳಿಕೆ

Update: 2024-10-01 14:09 GMT

ಸಾಂದರ್ಭಿಕ ಚಿತ್ರ| PC : PTI

 

ಭೋಪಾಲ್ : ಗಾರ್ಬಾ ನೃತ್ಯಗಾರರರು ಪೆಂಡಾಲ್ ಪ್ರವೇಶಿಸುವುದಕ್ಕೂ ಮುನ್ನ, ಅವರು ಗೋಮೂತ್ರವನ್ನು ಸೇವಿಸಬೇಕು ಎಂದು ಮಧ್ಯಪ್ರದೇಶದ ಇಂದೋರ್ ನ ಬಿಜೆಪಿ ನಾಯಕರೊಬ್ಬರು ಆಗ್ರಹಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಿಜೆಪಿ ನಾಯಕ ಚಿಂಟು ವರ್ಮರ ಈ ಹೇಳಿಕೆಯು ವಿವಾದ ಸೃಷ್ಟಿಸಿದ್ದು, ‘ಇದು ಹೊಸ ಧ್ರುವೀಕರಣದ ತಂತ್ರ’ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ. ನವರಾತ್ರಿಯ ಸಂದರ್ಭದಲ್ಲಿ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ವಿವಿಧ ನಗರಗಳಲ್ಲಿ ಪೆಂಡಾಲ್ ಗಳನ್ನು ಹಾಕಿ ಚೇತೋಹಾರಿ ಜಾನಪದ ನೃತ್ಯವಾದ ಗಾರ್ಬಾ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ.

ಸನಾತನ ಸಂಸ್ಕೃತಿಯ ಮಹತ್ವವನ್ನು ಒತ್ತಿ ಹೇಳಿರುವ ಬಿಜೆಪಿ ಜಿಲ್ಲಾಧ್ಯಕ್ಷ ಚಿಂಟು ವರ್ಮ, ಗಾರ್ಬಾ ನೃತ್ಯಗಾರರು ಪೆಂಡಾಲ್ ಪ್ರವೇಶಿಸುವುದಕ್ಕೂ ಮುನ್ನ ಅವರನ್ನು ಗೋಮೂತ್ರದಿಂದ ಶುದ್ಧೀಕರಿಸಬೇಕು ಎಂದು ಗಾರ್ಬಾ ನೃತ್ಯ ಸಂಘಟಕರಲ್ಲಿ ಮನವಿ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಗೋಮೂತ್ರ ಶುದ್ಧೀಕರಣದ ಹಿಂದಿರುವ ತರ್ಕವನ್ನು ವಿವರಿಸಿದ ಚಿಂಟು ವರ್ಮ, “ಆಧಾರ್ ಕಾರ್ಡ್ ನ ಸಂಖ್ಯೆಗಳನ್ನು ನಕಲು ಮಾಡಲು ಸಾಧ್ಯವಿದೆ. ಆದರೆ, ಯಾವುದೇ ಹಿಂದೂ ಕೂಡಾ ಗೋಮೂತ್ರ ಸೇವನೆಯನ್ನು ನಿರಾಕರಿಸಲಾರ” ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ನಾಯಕನ ಆಗ್ರಹವನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷದ ವಕ್ತಾರ ನೀಲಭ್ ಶುಕ್ಲಾ, ಪೆಂಡಾಲ್ ಪ್ರವೇಶಿಸುವುದಕ್ಕೂ ಮುನ್ನ, ಬಿಜೆಪಿ ನಾಯಕರೇ ಗೋಮೂತ್ರವನ್ನು ಸೇವಿಸಲಿ ಎಂದು ಸವಾಲು ಎಸೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News