ಮಧ್ಯ ಪ್ರದೇಶ: ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ದಾಂಧಲೆ; ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸಿ.ಟಿ.ರವಿ ವಿರುದ್ಧ ಪ್ರತಿಭಟನೆ

Update: 2023-10-22 17:15 GMT

ಸಿ.ಟಿ.ರವಿ twitter/@CTRavi_BJP ಕೇಂದ್ರ ಸಚಿವ ಭೂಪೇಂದ್ರ ಯಾದವ್ twitter/@byadavbjp

ಹೊಸದಿಲ್ಲಿ: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಟಿಕೆಟ್ ವಿತರಣೆಗೆ ಸಂಬಂಧಿಸಿ ಜಬಲ್‌ಪುರದ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರು ಭಾರೀ ಗಲಾಟೆ ನಡೆಸಿದ್ದಾರೆ. ರವಿವಾರ ಪ್ರಕಟವಾದ ಬಿಜೆಪಿ ಅಭ್ಯರ್ಥಿಗಳ ಐದನೇ ಪಟ್ಟಿಯಲ್ಲಿಯೂ ತಮ್ಮ ನೆಚ್ಚಿನ ಅಭ್ಯರ್ಥಿಗಳ ಹೆಸರಿಲ್ಲದಿದ್ದುರಿಂದ ರೊಚ್ಚಿಗೆದ್ದ ಅವರ ಬೆಂಬಲಿಗರು ದಾಂಧಲೆ ನಡೆಸಿದರು. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸಮ್ಮುಖದಲ್ಲೇ ಈ ಗಲಾಟೆ ನಡೆದಿದ್ದು, ಪಕ್ಷದ ನಾಯಕತ್ವವನ್ನು ಮುಜುಗರಕ್ಕೆ ಸಿಲುಕಿಸಿದೆ.

ತಮ್ಮ ನೆಚ್ಚಿನ ಆಕಾಂಕ್ಷಿ ಅಭ್ಯರ್ಥಿಗಳಿಗೆ ಟಿಕೆಟ್ ತಪ್ಪಿದ್ದರಿಂದ ನೊಂದ ಕೆಲವು ಕಾರ್ಯಕರ್ತರು ಸ್ಥಳದಲ್ಲಿದ್ದ ಸಚಿವ ಭೂಪೇಂದ್ರ ಯಾದವ್, ಕರ್ನಾಟಕದ ಬಿಜೆಪಿ ಮುಖಂಡ ಸಿ.ಟಿ.ರವಿ ರವಿ ವಿರುದ್ಧ ಘೋಷಣೆಗಳನ್ನು ಕೂಗಿದರು ಹಾಗೂ ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸಿದರು.

ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನನಿರತ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಚಿವ ಭೂಪೇಂದ್ರ ಯಾದವ್ ಅವರ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಲಾಗಿದೆ. ಸಾರ್ವಜನಿಕ ಸೇವೆಯ ಉದ್ಯೋಗಿಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಾಂಧಲೆಯಲ್ಲಿ ಭಾಗಿಯಾದ ಇತರ ಆರೋಪಿಗಳನ್ನು ಕೂಡಾ ಗುರುತಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಎ.ಪಿ.ಸಿಂಗ್ ತಿಳಿಸಿದ್ದಾರೆ.

ಕೇಂದ್ರ ಸಚಿವ ಯಾದವ್ ಸುತ್ತ ಬಿಜೆಪಿ ಕಾರ್ಯಕರ್ತರ ಗುಂಪೊಂದು ಮುತ್ತಿಗೆ ಹಾಕಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭೂಪೇಂದ್ರ ಯಾದವ್ ಅವರು ಮಧ್ಯಪ್ರದೇಶದ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿಯಾಗಿದ್ದಾರೆ. ಪರಸ್ಪರ ಹೊಕೈ ನಡೆಸುತ್ತಿದ್ದ ಕೆಲವು ಕಾರ್ಯಕರ್ತರು ಪರಸ್ಪರ ವಿರುದ್ಧ ಬೈಗುಳಗಳ ಸುರಿಮಳೆಗೆರೆಯುತ್ತಿರುವ ದೃಶ್ಯಗಳ ವಿಡಿಯೋಗಳು ಕೂಡಾ ಪ್ರಸಾರವಾಗಿವೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ರಿವಾಲ್ವರ್ ಅನ್ನು ಹೊರತೆಗೆಯಲು ಯತ್ನಿಸಿದ್ದ ಯಾದವ್ ಅವರ ಅಂಗರಕ್ಷಕನನ್ನು ಕೆಲವರು ಥಳಿಸಿದ್ದಾರೆ.

ಇಂದು 92 ಅಭ್ಯರ್ಥಿಗಳನ್ನೊಳಗೊಂಡ ಐದನೆ ಪಟ್ಟಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ತಮ್ಮ ನೆಚ್ಚಿನ ಆಕಾಂಕ್ಷಿ ಅಭ್ಯರ್ಥಿಗಳಿಗೆ ಟಿಕೆಟ್ ದೊರೆಯ ನಿರಾಸೆಯಿಂದ ಆಕ್ರೋಶಗೊಂಡ ಕೆಲವು ಕಾರ್ಯಕರ್ತರು ಯಾದವ್ ಹಾಗೂ ರಾಜ್ಯಸಭಾ ಸದಸ್ಯೆ ಕವಿತಾಪಾಟಿದಾರ್ ಅವರೊಂದಿಗೂ ವಾಗ್ವಾದಕ್ಕಿಳಿದರು.

ಮಧ್ಯಪ್ರದೇಶದ ಆಡಳಿತಾರೂಢ ಪಕ್ಷವಾದ ಬಿಜೆಪಿಯು ರಾಜ್ಯದ 230 ಕ್ಷೇತ್ರಗಳ ಪೈಕಿ 228ರ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಗುನಾ ಹಾಗೂ ವಿದಿಶಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲು ಬಾಕಿಯಿರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News