ಮಧ್ಯಪ್ರದೇಶ | ಧಾರ್ಮಿಕ ಕಾರ್ಯಕ್ರಮದ ವೇಳೆ ಗೋಡೆ ಕುಸಿದು ಒಂಭತ್ತು ಮಕ್ಕಳ ಮೃತ್ಯು

Update: 2024-08-04 15:36 GMT

ಸಾಗರ : ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಗೋಡೆ ಕುಸಿದು ಒಂಭತ್ತು ಮಕ್ಕಳು ಮೃತಪಟ್ಟಿರುವ ಘಟನೆ ರವಿವಾರ ಬೆಳಿಗ್ಗೆ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಶಹಪುರ ಗ್ರಾಮದಲ್ಲಿ ಸಂಭವಿಸಿದೆ.

ಇತರ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ. ಮೃತ ಮಕ್ಕಳು 10ರಿಂದ 15 ವರ್ಷ ಪ್ರಾಯದವರಾಗಿದ್ದಾರೆ.

ಶನಿವಾರ ಸಂಜೆ ಪ್ರದೇಶದಲ್ಲಿ ಸುರಿದಿದ್ದ ಭಾರೀ ಮಳೆಯಿಂದಾಗಿ ಗೋಡೆ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದರು. ಗೋಡೆ ಕುಸಿದಾಗ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೇರಿದ್ದ ಮಕ್ಕಳು ಶಿಥಿಲಗೊಂಡಿದ್ದ ಮನೆಯ ಬಳಿ ನಿರ್ಮಿಸಿದ್ದ ಟೆಂಟ್‌ನಲ್ಲಿದ್ದರು.

ಮಕ್ಕಳು ಕುಸಿದ ಗೋಡೆಯ ಅವಶೇಷಗಳು ಮತ್ತು ಟೆಂಟ್‌ನಡಿ ಸಿಲುಕಿದ್ದರು. ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಏಳು ಮಕ್ಕಳು ಆಸ್ಪತ್ರೆ ದಾರಿಯಲ್ಲಿ ಅಥವಾ ಆಸ್ಪತ್ರೆಗೆ ತಲುಪಿದ ಬಳಿಕ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ತಮ್ಮ ಹೆತ್ತವರ ಏಕೈಕ ಸಂತಾನವಾಗಿದ್ದರು ಎಂದು ಸ್ಥಳೀಯ ಬಿಜೆಪಿ ಶಾಸಕ ಗೋಪಾಲ್ ಭಾರ್ಗವ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಘಟನೆಯ ಕುರಿತು ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ಮೃತ ಮಕ್ಕಳ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ. ಗಾಯಗೊಂಡಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸುವಂತೆ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News