ಮಧ್ಯ ಪ್ರದೇಶ: ಆಸ್ಪತ್ರೆಯಲ್ಲಿ ಇಲಿಗಳ ಕಾಟ; ರೋಗಿಗಳ ಪರದಾಟ

Update: 2024-06-12 08:19 GMT

Photo screengrab :  X \ @FreePressMP

ಗ್ವಾಲಿಯರ್: ಗ್ವಾಲಿಯರ್ ನ ಬೃಹತ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾದ ಕಮಲ ರಾಜ ಆಸ್ಪತ್ರೆಯಲ್ಲಿ ಸೋಮವಾರ ಇಲಿಗಳು ಪ್ರಕ್ಷುಬ್ಧತೆ ಸೃಷ್ಟಿಸಿದ್ದು, ರಾತ್ರಿಪೂರಾ ರೋಗಿಗಳು ತಮ್ಮ ನವಜಾತ ಶಿಶುಗಳನ್ನು ಅವುಗಳ ಕಾಟದಿಂದ ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಆಸ್ಪತ್ರೆಯೊಳಗೆ ಕ್ಯಾಮೆರಾಗಳನ್ನು ನಿಷೇಧಿಸಿರುವುದರಿಂದ, ಆಸ್ಪತ್ರೆಯ ಪರಿಚಾರಕರು ಇಲಿಗಳ ಉಪಟಳದ ವಿಡಿಯೊವನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಿಸಿಕೊಂಡು, ಅವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ, ಈ ವಿಡಿಯೊಗಳು ವೈರಲ್ ಆಗಿವೆ.

ಗ್ವಾಲಿಯರ್ ನ ಗಜರಾಜ ವೈದ್ಯಕೀಯ ಕಾಲೇಜಿನಿಂದ ನಿರ್ವಹಿಸಲ್ಪಡುತ್ತಿರುವ ಕಮಲ ರಾಜ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ಗ್ವಾಲಿಯರ್-ಚಂಬಲ್ ಪ್ರಾಂತ್ಯದ ಅತಿ ಪುರಾತನ ಹಾಗೂ ಬೃಹತ್ ಆಸ್ಪತ್ರೆ ಮಾತ್ರವಲ್ಲದೆ, ಈ ಆಸ್ಪತ್ರೆಗೆ ನೆರೆಯ ರಾಜ್ಯಗಳಾದ ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಬುಂದೇಲ್ ಖಂಡ್ ಜಿಲ್ಲೆಗಳಿಂದ ಆಗಮಿಸುವ ರೋಗಿಗಳಿಗೂ ಸೇವೆ ಸಲ್ಲಿಸುತ್ತದೆ.

ಆದರೆ, ಇಲ್ಲಿ ನಿರ್ವಹಣೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಆಸ್ಪತ್ರೆಯ ಕಟ್ಟಡವು ಈಗಾಗಲೇ ಶಿಥಿಲಾವಸ್ಥೆ ತಲುಪಿದ್ದು, ಈಗ ರೋಗಿಗಳು ಇಲಿಯ ಬಾರಿ ಸಂಖ್ಯೆಯ ಸಂತಾನೋತ್ಪಾದನೆಯಿಂದ ಹೈರಾಣಾಗಿದ್ದಾರೆ. ಸಾವಿರಾರು ಇಲಿಗಳು ಹೆರಿಗೆ ಕೊಠಡಿ, ಹೆರಿಗೆಯೋತ್ತರ ಹಾಗೂ ಎನ್ಐಹಸಿಯು ವಾರ್ಡ್ ಗಳಂಥ ಸೂಕ್ಷ್ಮ ವಾರ್ಡ್ ಗಳು ಸೇರಿದಂತೆ ಎಲ್ಲ ವಾರ್ಡ್ ಗಳಲ್ಲೂ ಮುಕ್ತವಾಗಿ ಓಡಾಡುತ್ತಿವೆ. ಅವು ಪದೇ ಪದೇ ರೋಗಿಗಳು ಹಾಗೂ ಪರಿಚಾರಕರನ್ನು ಕಚ್ಚುತ್ತಲೂ ಇವೆ.

ಈ ಸಂಗತಿ ಬಯಲಾದ ನಂತರವೂ, ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸುತ್ತಿರುವ ಆಸ್ಪತ್ರೆಯ ಆಡಳಿತ ಮಂಡಳಿಯು, ಸಮಸ್ಯೆಯ ಕುರಿತು ಸಾರ್ವಜನಿಕವಾಗಿ ಮಾತನಾಡಲು ಹಿಂಜರಿಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News