ಕೇರಳ ವಿದ್ಯಾರ್ಥಿಗಳಿಂದ ನಿಫಾ ನೆಗೆಟಿವ್ ಪ್ರಮಾಣ ಪತ್ರ ಕೋರಿದ ಮಧ್ಯಪ್ರದೇಶ ವಿಶ್ವವಿದ್ಯಾಲಯ

Update: 2023-09-15 18:15 GMT

ಭೋಪಾಲ್: ಕೇರಳದಿಂದ ಬಂದಿರುವ ವಿದ್ಯಾರ್ಥಿಗಳು ನಿಫಾ ನೆಗೆಟಿವ್ ಪ್ರಮಾಣ ಪತ್ರ ಒದಗಿಸುವುದನ್ನು ಕಡ್ಡಾಯಗೊಳಿಸಿ ಮಧ್ಯಪ್ರದೇಶದ ಇಂದಿರಾಗಾಂಧಿ ನ್ಯಾಷನಲ್ ಟ್ರೈಬಲ್ ಯುನಿವರ್ಸಿಟಿ (IGNTU) ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯನ್ನು ಸೆಪ್ಟೆಂಬರ್ 14ರಂದು ಹೊರಡಿಸಲಾಗಿದ್ದು, ನಿಫಾ ನೆಗೆಟಿವ್ ಪ್ರಮಾಣ ಪತ್ರವನ್ನು ಒದಗಿಸಲು ವಿಫಲವಾಗುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಆವರಣವನ್ನು ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಪ್ರೊಫೆಸರ್ ಎಂ.ಟಿ.ವಿ.ನಾಗರಾಜು ಆದೇಶಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

ವಿವಿಯು ಗುರುವಾರ ಮತ್ತು ಶುಕ್ರವಾರದಂದು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಮಾಲೋಚನಾ ಶಿಬಿರವನ್ನು ಏರ್ಪಡಿಸಿದೆ. ಇದಲ್ಲದೆ, ಸೆಪ್ಟೆಂಬರ್ 18ರಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ತರಗತಿಗಳು ಪ್ರಾರಂಭವಾಗಲಿವೆ. ಈ ನಡುವೆ, ವಿದ್ಯಾರ್ಥಿಗಳು ನಿಫಾ ನೆಗೆಟಿವ್ ಪ್ರಮಾಣ ಪತ್ರವನ್ನು ತರಬೇಕು ಎಂದು ವಿಶ್ವವಿದ್ಯಾಲಯವು ಸೂಚಿಸಿದೆ. ಈ ದಿಢೀರ್ ಸುತ್ತೋಲೆಯು ವಿದ್ಯಾರ್ಥಿಗಳಲ್ಲಿ ಭೀತಿ ಹಾಗೂ ಅನಾನುಕೂಲತೆಯನ್ನು ಸೃಷ್ಟಿಸಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಅವರೆಲ್ಲ ಮನವಿ ಮಾಡಿದ್ದಾರೆ.

ಶುಕ್ರವಾರದ ಅಂತ್ಯಕ್ಕೆ ಕೇರಳದಲ್ಲಿ ಒಟ್ಟು ಆರು ನಿಫಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ನಾಲ್ಕು ಸಕ್ರಿಯ ಪ್ರಕರಣಗಳಾಗಿವೆ. ನಿಫಾ ಸೋಂಕಿಗೆ ತುತ್ತಾಗಿದ್ದ 44 ವರ್ಷ ಹಾಗೂ 40 ವರ್ಷದ ರೋಗಿಗಳು ಕ್ರಮವಾಗಿ ಆಗಸ್ಟ್ 30 ಹಾಗೂ ಸೆಪ್ಟೆಂಬರ್ 11ರಂದು ಮೃತಪಟ್ಟಿದ್ದರು. ಮೊದಲ ಐದು ಪ್ರಕರಣಗಳಲ್ಲಿ ಸೋಂಕಿತರೊಂದಿಗೆ ಸುಮಾರು 950 ರೋಗಿಗಳು ನಿಕಟ ಸಂಪರ್ಕ ಹೊಂದಿದ್ದು, ಈ ಪೈಕಿ 213 ಮಂದಿ ತೀರಾ ಅಪಾಯದ ವರ್ಗದಲ್ಲಿದ್ದಾರೆ. ಶುಕ್ರವಾರ ಆರನೆಯ ಸೋಂಕು ಪ್ರಕರಣ ದೃಢಪಡುವುದರೊಂದಿಗೆ ಸೋಂಕಿತರೊಂದಿಗೆ ನಿಕಟ ಸಂಪರ್ಕ ಹೊಂದಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರಕಟಿಸಿದ್ದು, ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿರ್ಬಂಧಿತ ವಲಯಗಳನ್ನು ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News