ರಿಯಾಝ್‌ ಮೌಲವಿ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು: ಪಿಣರಾಯಿ ವಿಜಯನ್‌

Update: 2024-04-02 09:28 GMT

 ಪಿಣರಾಯಿ ವಿಜಯನ್ | Photo: PTI 

ಕಲ್ಲಿಕೋಟೆ: ಏಳು ವರ್ಷಗಳ ಹಿಂದೆ ಕಾಸರಗೋಡಿನ ಮಸೀದಿಯೊಂದರಲ್ಲಿ ಹತ್ಯೆಗೀಡಾದ ಮದ್ರಸಾ ಶಿಕ್ಷಕ ಮಹಮ್ಮದ್ ರಿಯಾಝ್ ಮೌಲವಿ ಅವರ ಹಂತಕರಿಗೆ ತಕ್ಕ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಹೇಳಿದ್ದಾರೆ. ಕಾನೂನಿನ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಯಾವುದೇ ಬೆಲೆ ತೆತ್ತಾದರೂ ಧಾರ್ಮಿಕ ದ್ವೇಷದ ಹೆಸರಿನಲ್ಲಿ ಜನರನ್ನು ಕೊಲ್ಲುವ ಪರಿಪಾಠವನ್ನು ನಿಲ್ಲಿಸಬೇಕು ಮತ್ತು ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಕರಣದಲ್ಲಿ ಆರೋಪಿಗಳಾಗಿದ್ದ ಆರೆಸ್ಸೆಸ್ ಕಾರ್ಯಕರ್ತರನ್ನು ಖುಲಾಸೆಗೊಳಿಸಿದ ಬಗ್ಗೆ ತಮ್ಮ ಸರ್ಕಾರದ ವಿರುದ್ಧ ವಿರೋಧ ಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ವಿಜಯನ್, “ಪೊಲೀಸರು ಮತ್ತು ಪ್ರಾಸಿಕ್ಯೂಷನ್ ತನಿಖೆ ಹಾಗೂ ವಿಚಾರಣೆಯ ಉದ್ದಕ್ಕೂ ಪಾರದರ್ಶಕತೆ ಮತ್ತು ಸಂಪೂರ್ಣ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡಿದ್ದಾರೆ” ಎಂದು ಹೇಳಿದರು.

ಮೃತ ಮೌಲವಿಯವರ ಕುಟುಂಬದವರು ಕೂಡ ಈ ಪ್ರಕರಣದಲ್ಲಿ ತಮ್ಮ ಪ್ರಾಮಾಣಿಕತೆ ಮತ್ತು ಸಮರ್ಪಣಾಭಾವವನ್ನು ಅನೇಕ ಸಂದರ್ಭಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಅವರು ಹೇಳಿದರು.

ತನಿಖೆ ಅಥವಾ ಪ್ರಕರಣದ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ವಿಳಂಬವಾಗಿಲ್ಲ ಎಂದು ಅವರು ಪ್ರತಿಪಾದಿಸಿದರು.

ಆರೋಪಿಗಳಿಗೆ ಮುಸ್ಲಿಂ ಸಮುದಾಯದೊಂದಿಗೆ ಯಾವುದೇ ರೀತಿಯ ದ್ವೇಷವಿದೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ಗೆ ಸಾಧ್ಯವಾಗಲಿಲ್ಲ ಎಂದು ಕಾಸರಗೋಡಿನ ನ್ಯಾಯಾಲಯವು ಪ್ರಕರಣದಲ್ಲಿ ಮೂವರು ಆರೆಸ್ಸೆಸ್ ಕಾರ್ಯಕರ್ತರನ್ನು ಶನಿವಾರ ಖುಲಾಸೆಗೊಳಿಸಿತ್ತು.

ಎಲ್ಲಾ ಸಾಕ್ಷ್ಯಗಳು, ವೈಜ್ಞಾನಿಕ ಫಲಿತಾಂಶಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಹೊರತಾಗಿಯೂ, ಪ್ರಕರಣದ ತೀರ್ಪು ಪ್ರಾಸಿಕ್ಯೂಷನ್ ನ ಸಂಶೋಧನೆಗಳನ್ನು ಎತ್ತಿಹಿಡಿಯಲಿಲ್ಲ, ಇದು ಸಮಾಜದಲ್ಲಿ ಆಘಾತವನ್ನು ಉಂಟುಮಾಡಿದೆ ಎಂದು ಪಿಣರಾಯಿ ವಿಜಯನ್ ಪ್ರತಿಪಾದಿಸಿದರು.

ಬಂಧನವಾದ ದಿನದಿಂದ ಆರೋಪಿಗಳು ಏಳು ವರ್ಷ ಏಳು ದಿನಗಳನ್ನು ವಿಚಾರಣಾ ಕೈದಿಗಳಾಗಿ ಜೈಲಿನಲ್ಲಿ ಕಳೆದಿದ್ದಾರೆ. ಜಾಮೀನಿಗಾಗಿ ಹಲವು ಬಾರಿ ಪ್ರಯತ್ನಿಸಿದರೂ ಸರ್ಕಾರದ ಕಟ್ಟುನಿಟ್ಟಿನ ನಿಲುವಿನಿಂದಾಗಿ ಜಾಮೀನು ನಿರಾಕರಿಸಲಾಗಿದೆ ಎಂದು ವಿಜಯನ್ ಹೇಳಿದರು.

ತನಿಖಾ ತಂಡವು ಅಪರಾಧ ನಡೆದ 85 ನೇ ದಿನದಂದು ಆರೋಪಪಟ್ಟಿ ಸಲ್ಲಿಸಿದೆ ಎಂದು ಅವರು ಹೇಳಿದರು.

ಕಾಸರಗೋಡಿನ ಪ್ರಧಾನ ಸೆಷನ್ಸ್ ನ್ಯಾಯಾಲಯ ಶನಿವಾರ ನೀಡಿದ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News