ಎಂವಿಎ ಮೈತ್ರಿಕೂಟ | 210 ಸ್ಥಾನಗಳಲ್ಲಿ ಒಮ್ಮತ : ಸಂಜಯ್ ರಾವತ್
ಮುಂಬೈ: 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 210 ವಿಧಾನಸಭಾ ಕ್ಷೇತ್ರಗಳ ಸ್ಪರ್ಧೆಯ ವಿಚಾರದಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟವು ಒಮ್ಮತಕ್ಕೆ ತಲುಪಿದ್ದು, ಇದು ಮಹತ್ವದ ಸಾಧನೆಯಾಗಿದೆ ಎಂದು ಸೋಮವಾರ ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, “ನಾವು 210 ಸ್ಥಾನಗಳ ಕುರಿತು ಸಹಮತಕ್ಕೆ ತಲುಪಿದ್ದೇವೆ. ಇದೊಂದು ಮಹತ್ತರ ಸಾಧನೆಯಾಗಿದೆ. ಈ ಚುನಾವಣೆಯಲ್ಲಿ ನಾವು ಜಂಟಿ ಶಕ್ತಿಯಾಗಿ ಸ್ಪರ್ಧಿಸಲಿದ್ದು, ಮಹಾರಾಷ್ಟ್ರವನ್ನು ಲೂಟಿ ಹೊಡೆಯುತ್ತಿರುವ ಶಕ್ತಿಗಳನ್ನು ಪರಾಭವಗೊಳಿಸಲಿದ್ದೇವೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಮಹಾವಿಕಾಸ್ ಅಘಾಡಿ ಮೈತ್ರಿಕೂಟವು ಶಿವಸೇನೆ (ಉದ್ಧವ್ ಬಣ), ಕಾಂಗ್ರೆಸ್ ಹಾಗೂ ಎನ್ಸಿಪಿ (ಶರದ್ ಬಣ) ಪಕ್ಷಗಳನ್ನು ಹೊಂದಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಹೊರ ಬಂದು, ಎಲ್ಲ 288 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಸುದ್ದಿ ವಾಹಿನಿಗಳು ಸತತ ವರದಿಗಳನ್ನು ಪ್ರಕಟಿಸಿದ ಬೆನ್ನಿಗೇ, ಸಂಜಯ್ ರಾವತ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಸ್ಥಾನ ಹಂಚಿಕೆಯ ಕುರಿತು ಕಾಂಗ್ರೆಸ್ ಹಾಗೂ ಶಿವಸೇನೆ (ಉದ್ಧವ್ ಬಣ) ನಡುವೆ ಸಹಮತ ಮೂಡಿಲ್ಲ ಎಂಬ ವದಂತಿಗಳ ನಡುವೆಯೇ, ಕಳೆದ ಕೆಲವು ದಿನಗಳಿಂದ ಮೂರು ಮುಖ್ಯ ವಿರೋಧ ಪಕ್ಷಗಳು ಸ್ಥಾನ ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಬಿರುಸಿನ ಮಾತುಕತೆಯಲ್ಲಿ ತೊಡಗಿದ್ದವು.