ಮಹಾರಾಷ್ಟ್ರ ವಿಧಾನಸಭಾ ಚುನಾವಣೆ |ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ನ ಯಾವುದೇ ಪಾತ್ರವಿರಲಿಲ್ಲ : ಮಲ್ಲಿಕಾರ್ಜುನ ಖರ್ಗೆ

Update: 2024-11-13 15:05 GMT

ಮಲ್ಲಿಕಾರ್ಜುನ ಖರ್ಗೆ | PTI  

ಲಾತೂರ್ (ಮಹಾರಾಷ್ಟ್ರ): ಸ್ವಾತಂತ್ರ್ಯ ಸಂಗ್ರಾಮ ಹಾಗೂ ದೇಶದ ಐಕ್ಯತೆಯಲ್ಲಿ ಬಿಜೆಪಿ ಮತ್ತು ಆದರ ಸೈದ್ಧಾಂತಿಕ ಮಾತೃಸಂಸ್ಥೆ ಆರೆಸ್ಸೆಸ್ ನ ಯಾವುದೇ ಪಾತ್ರವಿರಲಿಲ್ಲ ಎಂದು ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. 

ಆಡಳಿತಾರೂಢ ಬಿಜೆಪಿಯ “ವಿಭಜನೆಯಾದರೆ, ಕುಸಿದು ಬೀಳುತ್ತೀರಿ”, “ಒಗ್ಗಟ್ಟಿದ್ದರೆ ಸುರಕ್ಷಿತವಾಗಿರುತ್ತೀರಿ” ಎಂಬ ಘೋಷಣೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, ಈ ಘೊಷಣೆಗಳು ವಿಭಜನಕಾರಿಯಾಗಿವೆ ಎಂದು ಆರೋಪಿಸಿದರು.

ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಭಾಗವಾಗಿ ಲಾತೂರ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಖರ್ಗೆ, ಬಿಜೆಪಿ ನೇತೃತ್ವದ ಮಹಾಯುತಿ ಸರಕಾರವನ್ನು ಕಳ್ಳರ ಸರಕಾರ ಎಂದು ಬಣ್ಣಿಸಿದರಲ್ಲದೆ, ಈ ಸರಕಾರವನ್ನು ಪರಾಭವಗೊಳಿಸಿ ಎಂದು ಜನರಿಗೆ ಕರೆ ನೀಡಿದರು.

ಸಂವಿಧಾನ ಪುಸ್ತಕವನ್ನು ಬೀಸುತ್ತಿರುವ ಕಾಂಗ್ರೆಸ್ ನಾಯಕರ ಕುರಿತು ಪ್ರಶ್ನಿಸಿದ್ದ ಪ್ರಧಾನಿ ಮೋದಿ ವಿರುದ್ಧವೂ ಖರ್ಗೆ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಜಾತಿ ಗಣತಿಯ ಭರವಸೆಯು ಐಕ್ಯತೆ ಹಾಗೂ ಎಲ್ಲ ವರ್ಗದ ಜನರಿಗೂ ಸಮಾನವಾಗಿ ಲಾಭವನ್ನು ಹಂಚುವ ಗುರಿ ಹೊಂದಿದೆ. ಜಾತಿ ಗಣತಿಯು ಜನರನ್ನು ವಿಭಜಿಸುವುದಿಲ್ಲ ಎಂದು ಹೇಳಿದರು.

“ದೇಶ ಹಾಗೂ ಎಲ್ಲ ಸಮುದಾಯಗಳನ್ನು ಒಗ್ಗಟ್ಟಾಗಿರಿಸಲು ಕಾಂಗ್ರೆಸ್ ನಾಯಕರು ತಮ್ಮ ಜೀವ ತೆತ್ತಿದ್ದಾರೆ. ಅದಕ್ಕೆ ವ್ಯತಿರಿಕ್ತವಾಗಿ ಸ್ವಾತಂತ್ರ್ಯ ಸಂಗ್ರಾಮ ಹಾಗೂ ದೇಶದ ಐಕ್ಯತೆಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ನ ಯಾವುದೇ ಕೊಡುಗೆಯಿಲ್ಲ” ಎಂದು ಹೇಳಿದ ಖರ್ಗೆ, ‘ವಿಭಜನೆಯಾದರೆ, ಕುಸಿದು ಬೀಳುತ್ತೀರಿ’ ಹಾಗೂ “ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೀರಿ’ ಎಂಬ ಘೋಷಣೆಗಳನ್ನು ಕೂಗಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡರು.

ಮಹಾಯುತಿ ಸರಕಾರ ಕಳ್ಳರ ಸರಕಾರವಾಗಿದೆ. ದೇಶದ್ರೋಹಿಗಳಿಗೆ ಪಾಠ ಕಲಿಸಲು ವಿಧಾನಸಭಾ ಚುನಾವಣೆ ಒಂದು ಅವಕಾಶವಾಗಿದೆ ಎಂದು ಅವರು ಮತದಾರರಿಗೆ ಕರೆ ನೀಡಿದರು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಎನ್ಡಿಎ ಸರಕಾರವನ್ನು ಗುರಿಯಾಗಿಸಿಕೊಂಡು ಮಹಾರಾಷ್ಟ್ರದಲ್ಲಿನ ರೈತರ ಆತ್ಮಹತ್ಯೆಯಿಂದ ಹಿಡಿದು ಸಂಪತ್ತಿನ ಕ್ರೋಡೀಕರಣದವರೆಗೆ ಪ್ರಸ್ತಾಪಿಸಿದರು.

“ಮಹಾರಾಷ್ಟ್ರದಲ್ಲಿ ಪ್ರತಿದಿನ ಏಳು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ಶೇ. 65ರಷ್ಟು ಸಂಪತ್ತು ಜನಸಂಖ್ಯೆಯ ಶೇ. 5ರಷ್ಟು ಜನರ ಬಳಿ ಕ್ರೋಡೀಕೃತಗೊಂಡಿದೆ. ಕೇವಲ ಶೇ. 3ರಷ್ಟು ಸಂಪತ್ತು ಮಾತ್ರ ಬಡವರ ಬಳಿ ಇದೆ. ಇದು ಪ್ರಧಾನಿ ಮೋದಿ, ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸರಕಾರ” ಎಂದು ಅವರು ಟೀಕಾಪ್ರಹಾರ ನಡೆಸಿದರು.

ಪ್ರಧಾನಿ ಮೋದಿ ತಮ್ಮ ಸಾಧನೆ ಮತ್ತು ಕೆಲಸದ ಸೈದ್ಧಾಂತಿಕತೆ ಕುರಿತು ಮಾತನಾಡಬೇಕೇ ಹೊರತು, ಸುಳ್ಳುಗಳನ್ನು ಹರಡಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

“ವಿದೇಶಗಳಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ಮರಳಿ ತಂದ ನಂತರ, ದೇಶದ ಸಾಮಾನ್ಯ ಜನರ ಖಾತೆಗೆ ತಲಾ ರೂ. 15 ಲಕ್ಷ ಜಮೆ ಮಾಡಲಾಗುವುದು ಹಾಗೂ ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಮೋದಿ ಸುಳ್ಳು ಹೇಳಿದ್ದರು” ಎಂದು ಖರ್ಗೆ ಆರೋಪಿಸಿದರು.

ಕಾಂಗ್ರೆಸ್ ಸರಕಾರಗಳ ಶಿಕ್ಷಣ ಹಕ್ಕು, ನರೇಗಾ ಯೋಜನೆ ಹಾಗೂ ಆಹಾರ ಭದ್ರತೆ ಕಾಯ್ದೆವರೆಗಿನ ಸಾಧನೆಗಳನ್ನು ಖರ್ಗೆ ಪಟ್ಟಿ ಮಾಡಿದರು.

“ಬಿಜೆಪಿಯು ಸುಳ್ಳು ಭರವಸೆಗಳನ್ನು ನೀಡಿದರೆ, ಕಾಂಗ್ರೆಸ್ ಸರಕಾರಗಳು ಕಾರ್ಖಾನೆಗಳನ್ನು ಸ್ಥಾಪಿಸಲು ಕೆಲಸ ಮಾಡಿದವು” ಎಂದೂ ಅವರು ಹೇಳಿದರು.

ಸಮಾವೇಶದಲ್ಲಿ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಖರ್ಗೆ, ಸಮಾಜ ಹಾಗೂ ಸಮಾನತೆಗೆ ಬಿ.ಆರ್.ಅಂಬೇಡ್ಕರ್ ನೀಡಿದ ಕೊಡುಗೆಗಳನ್ನು ಉಲ್ಲೇಖಿಸಿದರು.

“ಕೇವಲ ಅಂಬೇಡ್ಕರ್ ಸಂವಿಧಾನ ಮಾತ್ರ ಸಮಾಜದ ಎಲ್ಲ ವರ್ಗಗಳಿಗೂ ರಕ್ಷಣೆಯ ಖಾತರಿ ನೀಡುತ್ತದೆ. ಕಾಂಗ್ರೆಸ್ ಖಾಲಿ ಸಂವಿಧಾನ ಪ್ರತಿಯನ್ನು ಪ್ರದರ್ಶಿಸುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. ಇದು ಖಾಲಿ ಸಂವಿಧಾನ ಪ್ರತಿಯೆ?” ಎಂದು ಸಂವಿಧಾನ ಪ್ರತಿಯನ್ನು ತೆರೆದು ತೋರಿಸಿ ಖರ್ಗೆ ಪ್ರಶ್ನಿಸಿದರು.

“ಸಂವಿಧಾನ ಪ್ರತಿಯ ಕೆಂಪು ಹೊದಿಕೆಯು ನಕ್ಸಲಿಸಂ ಅನ್ನು ಸಂಕೇತಿಸುತ್ತಿದ್ದು, ವಿರೋಧ ಪಕ್ಷಗಳು ನಗರ ನಕ್ಸಲರು ಎಂದು ಮೋದಿ ಆರೋಪಿಸಿದ್ದಾರೆ. ಅದೇ ಮೋದಿ, ಈ ಹಿಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಇದೇ ಸಂವಿಧಾನ ಪ್ರತಿಯನ್ನು ನೀಡಿದ್ದರು. ಹಾಗಾದರೆ, ನಾವೂ ಅವರನ್ನು ನಗರ ನಕ್ಸಲರು ಎಂದು ಕರೆಯೋಣವೆ?” ಎಂದೂ ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News