ನಾಗಪುರ | Audi ಕಾರಿನಲ್ಲಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ಪರಾರಿಯಾದ ಮಹಾರಾಷ್ಟ್ರ ಬಿಜೆಪಿ ನಾಯಕನ ಪುತ್ರ

Update: 2024-09-10 06:01 GMT

Photo credit: indiatoday.in

ನಾಗಪುರ : ಸೋಮವಾರ ನಾಗ್ಪುರದಲ್ಲಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರ ಪುತ್ರನ ಒಡೆತನದ Audi ಕಾರು ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಸಂಕೇತ್ ಬಾವಂಕುಲೆ ಸೇರಿದಂತೆ ಉಳಿದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಬಂಧಿಸಲಾದ ಇಬ್ಬರು ಮದ್ಯಪಾನ ಮಾಡಿದ್ದರು ಎಂದು ತಿಳಿದು ಬಂದಿದೆ. ಆಡಿ ಕಾರು ಮೊದಲಿಗೆ ದೂರುದಾರ ಜಿತೇಂದ್ರ ಸೋನಕಾಂಬಳೆ ಅವರ ಕಾರಿಗೆ ಢಿಕ್ಕಿ ಹೊಡೆದು, ನಂತರ ಬೈಕ್ ಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಅಪಘಾತದಲ್ಲಿ ಬೈಕ್ ನಲ್ಲಿ ಸವಾರರಿಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಬಂಧಿತ ಅರ್ಜುನ್ ಹಾವ್ರೆ ಮತ್ತು ರೋನಿತ್ ಚಿತ್ತಮ್ವಾರ್ ಹೊರತು ಪಡಿಸಿ ಕಾರಿನಲ್ಲಿ ಅಪಘಾತದ ವೇಳೆ ಸಂಕೇತ್ ಬಾವನಕುಳೆ ಸೇರಿದಂತೆ ಕಾರಿನಲ್ಲಿ ಇನ್ನೂ ಮೂವರಿದ್ದರು. ಘಟನೆ ನಡೆದಾಗ ಆರೋಪಿಗಳು ಧರಂಪೇತ್‌ನ ಬಾರ್‌ನಿಂದ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ.

"ಆಡಿ ಕಾರು ಮಂಕಾಪುರದ ಕಡೆಗೆ ಚಲಿಸುತ್ತಿದ್ದ ಇನ್ನೂ ಕೆಲವು ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಟಿ-ಪಾಯಿಂಟ್‌ನಲ್ಲಿ ವಾಹನವು ಪೋಲೋ ಕಾರಿಗೆ ಢಿಕ್ಕಿ ಹೊಡೆದಿದೆ. ಅದರಲ್ಲಿದ್ದವರು ಆಡಿಯನ್ನು ಹಿಂಬಾಲಿಸಿ ಮಂಕಾಪುರ ಸೇತುವೆಯ ಬಳಿ ನಿಲ್ಲಿಸಿದರು. ಸಂಕೇತ್ ಬಾವಂಕುಲೆ ಸೇರಿದಂತೆ ಮೂವರು ಪ್ರಯಾಣಿಕರು ಪರಾರಿಯಾಗಿದ್ದಾರೆ," ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪೋಲೋ ಕಾರಿನಲ್ಲಿದ್ದವರು ಕಾರಿನ ಚಾಲಕ ಅರ್ಜುನ್ ಹಾವ್ರೆ ಮತ್ತು ರೋನಿತ್ ಚಿತ್ತಮ್ವಾರ್ ಅವರನ್ನು ಅಡ್ಡಗಟ್ಟಿದ್ದಾರೆ. ಅವರನ್ನು ತಹಸಿಲ್ ಪೊಲೀಸ್ ಠಾಣೆಗೆ ಕರೆದೊಯ್ದು ಹೆಚ್ಚಿನ ತನಿಖೆಗಾಗಿ ಸೀತಾಬುಲ್ಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸೋನಕಾಂಬಳೆ ಅವರ ದೂರಿನ ಮೇರೆಗೆ ಅತಿವೇಗದ ಚಾಲನೆ ಮತ್ತು ಇತರ ಅಪರಾಧಗಳ ಪ್ರಕರಣವನ್ನು ದಾಖಲಿಸಲಾಗಿದೆ. ಹಾವ್ರೆ ಮತ್ತು ಚಿತ್ತಮ್ವಾರ್ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ ಬಾವನಕುಳೆ, ಆಡಿ ಕಾರು ತನ್ನ ಮಗನ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

"ಪೊಲೀಸರು ಅಪಘಾತದ ಬಗ್ಗೆ ಯಾವುದೇ ಪಕ್ಷಪಾತವಿಲ್ಲದೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಾನು ಯಾವುದೇ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿಲ್ಲ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News