"ಅತಿಯಾದ ಆತ್ಮವಿಶ್ವಾಸ ಬೇಡ": ಮಹಾರಾಷ್ಟ್ರ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಎಚ್ಚರಿಕೆ
ಹೊಸದಿಲ್ಲಿ: ಅತಿಯಾದ ಆತ್ಮವಿಶ್ವಾಸವಿಟ್ಟುಕೊಳ್ಳದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಹರ್ಯಾಣದ ಸೋಲಿನ ನಂತರ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವ ಕಾಂಗ್ರೆಸ್ ನಾಯಕತ್ವವು, ಮಹಾರಾಷ್ಟ್ರ ಕಾಂಗ್ರೆಸ್ ಘಟಕವು ಪ್ರತಿ ಹೆಜ್ಜೆಯನ್ನೂ ಒಗ್ಗಟ್ಟಾಗಿ ಮತ್ತು ಎಚ್ಚರಿಕೆಯಿಂದ ಇಡಬೇಕು ಎಂದು ತಾಕೀತು ಮಾಡಿದೆ.
ಸೋಮವಾರ ಕಾಂಗ್ರೆಸ್ ಕೇಂದ್ರ ನಾಯಕತ್ವದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ರಾಜ್ಯ ನಾಯಕತ್ವವು ಅತಿಯಾದ ಆತ್ಮವಿಶ್ವಾಸದಿಂದ ಹೊರ ಬರಬೇಕು ಹಾಗೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ನಾಯಕರಿಗೆ ಕಿವಿಮಾತು ಹೇಳಿದರು.
ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಹುಮತ ಪಡೆಯದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್, ಅದೇ ಆತ್ಮವಿಶ್ವಾಸದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯನ್ನು ಎದುರಿಸಿತ್ತು. ಆದರೆ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವೈಫಲ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಎಚ್ಚರಿಕೆ ಮಹತ್ವ ಪಡೆದುಕೊಂಡಿದೆ.