ಶಿವಾಜಿ ಪ್ರತಿಮೆ ಕುಸಿತಕ್ಕೆ ಕ್ಷಮೆ ಯಾಚಿಸಿದ ಮಹಾರಾಷ್ಟ್ರ ಡಿಸಿಎಂ
ಮುಂಬೈ: ನಗರದ ಮಳವಾನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಶಿವಾಜಿ ಪ್ರತಿಮೆ ಕುಸಿದು ಬಿದ್ದಿರುವ ಘಟನೆ ಮಹಾರಾಷ್ಟ್ರ ರಾಜಕೀಯದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಳಪೆ ಕಾಮಗಾರಿ ಕುಸಿತಕ್ಕೆ ಕಾರಣ ಎಂದು ಕಾಂಗ್ರೆಸ್ ಆಪಾದಿಸಿದ್ದರೆ, ಈ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಬಿಜೆಪಿ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ಮಾಡಿದೆ. ಈ ಮಧ್ಯೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಈ ಘಟನೆಗಾಗಿ ಮಹಾರಾಷ್ಟ್ರದ 13 ಕೋಟಿ ಜನರ ಕ್ಷಮೆ ಯಾಚಿಸಿದ್ದಾರೆ.
ಪ್ರತಿಮೆ ನಿರ್ಮಾಣದಲ್ಲಿ ಭ್ರಷ್ಟಾಚಾರವನ್ನು ತಪ್ಪಿಸಬೇಕಿತ್ತು ಎಂದು ಎನ್ ಸಿಪಿ(ಎಸ್ಪಿ) ಮುಖಂಡ ಶರದ್ ಪವಾರ್ ಹೇಳಿಕೆ ನೀಡಿರುವುದನ್ನು ಮತ್ತೊಬ್ಬ ಡಿಸಿಎಂ ದೇವೇಂದ್ರ ಫಡ್ನವೀಸ್ ಕಟುವಾಗಿ ಟೀಕಿಸಿದ್ದಾರೆ. ಜೀವನದ ಯಾವುದೇ ಹಂತದಲ್ಲೂ ಭ್ರಷ್ಟಾಚಾರ ಇರಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂಥ ಹೇಳಿಕೆ ನೀಡಲಾಗುತ್ತಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.
"ಈ ಘಟನೆ ಬಗ್ಗೆ ತನಿಖೆ ನಡೆಸಲು ನೌಕಾಪಡೆ ಸಮಿತಿ ರಚಿಸಿದೆ. ತಂಡ ಈಗಾಗಲೇ ಸ್ಥಶಳಕ್ಕೆ ಭೇಟಿ ನೀಡಿದ್ದು, ಇಂತಹ ಘಟನೆ ಮರುಕಳಿಸದಂತೆ ತಡೆಯಲು ಸಮಿತಿ ಶಿಫಾರಸ್ಸುಗಳನ್ನು ಸಲ್ಲಿಸಲಿದೆ. ಪೊಲೀಸ್ ಎಫ್ಐಆರ್ ಕೂಡಾ ದಾಖಲಿಸಲಾಗಿದ್ದು, ಈ ಘಟನೆಗೆ ಕಾರಣರಾದ ನಾಗರಿಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ವಿವರಿಸಿದ್ದಾರೆ.
ಶಿವಸೇನೆ (ಯುಬಿಟಿ) ಬಣದ ಟೀಕೆ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಬಿಜೆಪಿ ಘಟಕದ ಅಧ್ಯಕ್ಷ ಆಶೀಶ್ ಶೇಲರ್, "ತಮ್ಮ ಬೇಟೆ ಸಾಯಬೇಕು ಮತ್ತು ಅದರಿಂದ ಔತಣ ಸವಿಯಲು ರಾಜಕೀಯ ಹದ್ದುಗಳು ಕಾಯುತ್ತಿವೆ" ಎಂದು ವ್ಯಂಗ್ಯವಾಡಿದ್ದಾರೆ. ಈ ಘಟನೆ ದುರದೃಷ್ಟಕರ, ನೋವಿನ ಸಂಗತಿ ಮತ್ತು ಆತಂಕಕಾರಿ ಎಂದಿರುವ ಅವರು, ಘಟನೆಗೆ ರಾಜ್ಯದ ಜನತೆಯ ಕ್ಷಮೆ ಯಾಚಿಸಿದ್ದಾರೆ.