ಸಂಸತ್ ಭದ್ರತಾ ವೈಫಲ್ಯ: 6ನೇ ಆರೋಪಿ ಮಹೇಶ್ ಕುಮಾವತ್ ಬಂಧನ
ಹೊಸದಿಲ್ಲಿ: ಸಂಸತ್ ಭದ್ರತಾ ವೈಫಲ್ಯ ಪ್ರಕರಣದ ಆರನೇ ಆರೋಪಿ ಮಹೇಶ್ ಕುಮಾವತ್ ಎಂಬಾತನನ್ನು ದಿಲ್ಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಈತ ಕೂಡ ಈ ಸಂಚಿನ ಭಾಗವಾಗಿದ್ದನೆಂದು ದೃಢಪಟ್ಟ ನಂತರ ಆತನ ಬಂಧನವಾಗಿದೆ.
ಮಹೇಶ್ ರಾಜಸ್ಥಾನದ ನಾಗೋರ್ ಜಿಲ್ಲೆಯವನಾಗಿದ್ದು, ಸಂಸತ್‌ನಲ್ಲಿ ಭದ್ರತಾ ವೈಫಲ್ಯವಾದ ದಿನದಂದು ಈತ ಕೂಡ ದಿಲ್ಲಿಗೆ ಆಗಮಿಸಿದ್ದನೆಂದು ಪೊಲೀಸರು ಹೇಳಿದ್ದಾರೆ.
ಸಂಚಿನ ಪ್ರಮುಖ ರೂವಾರಿಯಾಗಿದ್ದ ಲಲಿತ್ ಝಾ ಘಟನೆ ನಡೆದ ಬೆನ್ನಲ್ಲೇ ರಾಜಸ್ಥಾನದಲ್ಲಿ ಮಹೇಶ್ ಇರುವ ಸ್ಥಳದಲ್ಲಿ ಅಡಗಿ ಕುಳಿತಿದ್ದ. ಈ ಸಂಚಿನ ಭಾಗವಾಗಿದ್ದ ಇತರ ನಾಲ್ಕು ಮಂದಿಯ ಮೊಬೈಲ್ ಫೋನ್ ನಾಶಪಡಿಸುವಲ್ಲಿ ಮಹೇಶ್ ಕೂಡ ಲಲಿತ್‌ಗೆ ಜೊತೆಯಾಗಿದ್ದ.
ಡಿಸೆಂಬರ್ 13ರಂದು ಸಂಸತ್ ಕಟ್ಟಡದ ಹೊರಗೆ ಪ್ರತಿಭಟಿಸಿದ್ದ ಇಬ್ಬರಲ್ಲಿ ಒಬ್ಬಳಾಗಿದ್ದ ನೀಲಂ ಜೊತೆಗೆ ಮಹೇಶ್ ನಿರಂತರ ಸಂಪರ್ಕದಲ್ಲಿದ್ದ ಎಂದೂ ತಿಳಿದು ಬಂದಿದೆ.
ಲಲಿತ್ ಮತ್ತು ಮಹೇಶ್ ಇಬ್ಬರೂ ಗುರುವಾರವೇ ದಿಲ್ಲಿಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ಲಲಿತ್ ಬಂಧನವನ್ನು ಶುಕ್ರವಾರ ಅಧಿಕೃತಗೊಳಿಸಲಾಗಿತ್ತು. ಮಹೇಶ್‌ನ ಸೋದರ ಸಂಬಂಧಿ ಕೈಲಾಶ್ ಎಂಬಾತನನ್ನೂ ಪೊಲೀಸರು ವಿಚಾರಿಸಿದ್ದರೂ ಆತನನ್ನು ಇನ್ನೂ ಬಂಧಿಸಿಲ್ಲ.