ಮೈತೈ ವಿದ್ಯಾರ್ಥಿಗಳ ಹತ್ಯೆ ಪ್ರಕರಣ: ಪುಣೆಯಲ್ಲಿ ಓರ್ವ ಆರೋಪಿಯ ಬಂಧನ
ಹೊಸದಿಲ್ಲಿ: ಈ ವರ್ಷದ ಜುಲೈನಲ್ಲಿ ನಾಪತ್ತೆಯಾದ ಇಬ್ಬರು ಮೈತೈ ವಿದ್ಯಾರ್ಥಿಗಳ ಅಪಹರಣ ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳವು ಶನಿವಾರ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದೆ. ಈ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಇನ್ನೂ ಕೂಡಾ ಪತ್ತೆಯಾಗಿಲ್ಲವೆಂದು ತಿಳಿದುಬಂದಿದೆ.
ಆರೋಪಿ ಪಾವೊಲುನ್ ಮಾಂಗ್ನನ್ನು ಪುಣೆಯಲ್ಲಿ ಬಂಧಿಸಲಾಗಿದ್ದು, ಆನಂತರ ಗುವಾಹಟಿಯಲ್ಲಿರುವ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ತನಿಖೆಗಾಗಿ ಆತನನ್ನು ಆಕ್ಟೋಬರ್ 16ರವರೆಗೆ ಕಸ್ಟಡಿಗಾಗಿ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈತೈ ವಿದ್ಯಾರ್ಥಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸ್ಥಳೀಯ ಪೊಲೀಸರ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸಿ, ಆಕ್ಟೋಬರ್ 1ರಂದು ಪಾವೊಮಿನ್ಲುಮ್ ಹಾವೊಕಿಪ್ ಹಾಗೂ ಎಸ್.ಮಲ್ಸ್ವಾಮ್ ಹಾವೊಕಿಪ್ ಎಂಬ ಇಬ್ಬರು ಪುರುಷರು ಹಾಗೂ ಲಿಂಗ್ನೈಚೊಂಗ್ ಬೈತೆ ಹಾಗೂ ತಿನ್ನೆಲ್ಹಿಂಗ್ ಹೆಂತಾಂಗ್ ಇಬ್ಬರು ಮಹಿಳೆಯರನ್ನು ಬಂಧಿಸಿದ್ದರು.
ಈ ಇಬ್ಬರು ಮೈತೈ ವಿದ್ಯಾರ್ಥಿಗಳು ಜುಲೈ 6ರಂದು ಬಿಷ್ಣುಪುರ ಸಮೀಪ ನಾಪತ್ತೆಯಾಗಿದ್ದರು. ಸೆಪ್ಟೆಂಬರ್ 25ರಂದು ಸಾಮಾಜಿಕ ಜಾಲತಾಣಗಳಲ್ಲಿ ಅವರ ಮೃತದೇಹಗಳ ಛಾಯಾಚಿತ್ರಗಳು ಹರಿದಾಡಿದ್ದು, ಭಾರೀ ಪ್ರತಿಭಟನೆಯ ಕಿಡಿಯನ್ನು ಹೊತ್ತಿಸಿತ್ತು. ಒಂದು ಛಾಯಾಚಿತ್ರದಲ್ಲಿ ಈ ಇಬ್ಬರು ಶಸ್ತ್ರಾಸ್ತ್ರಧಾರಿಗಳ ಎದುರು ಕುಳಿತಿರುವುದನ್ನು ತೋರಿಸಲಾಗಿತ್ತು. ಇನ್ನೊಂದು ಫೋಟೋದಲ್ಲಿ ಅವರ ಮೃತದೇಹಗಳು ಬಂಡೆಗಲ್ಲೊಂದರ ಸಮೀಪ ಬಿದ್ದಿರುವುದು ಕಂಡುಬಂದಿತ್ತು.