ಮೇಕ್ ಇನ್ ಇಂಡಿಯಾ: 45,000 ಕೋಟಿ ರೂ. ಮೌಲ್ಯದ ಮಿಲಿಟರಿ ಸಾಮಾಗ್ರಿ ಖರೀದಿಗೆ ರಕ್ಷಣಾ ಇಲಾಖೆ ಅನುಮೋದನೆ
ಹೊಸದಿಲ್ಲಿ: ದೇಶದ ರಕ್ಷಣಾ ವಲಯಕ್ಕೆ ಬಲವನ್ನು ತುಂಬುವ ಉಪಕ್ರಮವಾಗಿ ಕೇಂದ್ರ ಸರಕಾರವು 12 ಎಸ್ಯು-30 ಎಂಕೆಐ ಫೈಟರ್ ಜೆಟ್ ಗಳು ಹಾಗೂ ಆಗಸದಿಂದ ನೆಲಕ್ಕೆ ಪ್ರಕ್ಷೇಪಿಸುವ ಧ್ರುವಾಸ್ತ್ರ ಕ್ಷಿಪಣಿಗಳನ್ನು ಖರೀದಿಸಲು ಮತ್ತು ಡೋರ್ನಿಯರ್ ವಿಮಾನವನ್ನು ಮೇಲ್ದರ್ಜೆಗೇರಿಸಲು 45 ಸಾವಿರ ಕೋಟ ರೂ. ಮೊತ್ತದ 9 ರಕ್ಷಣಾ ಖರೀದಿ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ.
ಭಾರತೀಯ ತಯಾರಕರಿಂದಲೇ ಈ ಎಲ್ಲಾ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸಲಾಗುವುದು. ಇದರಿಂದಾಗಿ ಆತ್ಮನಿರ್ಭರ ಭಾರತದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತದ ರಕ್ಷಣಾ ಕೈಗಾರಿಕೆಗೆ ಗಣನೀಯ ಉತ್ತೇಜನ ದೊರೆಯಲಿದೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪೂರ್ವ ಲಡಾಕ್ ನಲ್ಲಿ ಚೀನಾದ ಜೊತೆ ಗಡಿ ಉದ್ವಿಗ್ನತೆ ಹೊಗೆಯಾಡುತ್ತಿರುವ ನಡುವೆಯೇ ಮೇಕ್ ಇನ್ ಇಂಡಿಯಾ ಕಾರ್ಯಚೌಕಟ್ಟಿನಡಿ ಈ ಖರೀದಿಗಳಿಗೆ ರಕ್ಷಣಾ ಖರೀದಿ ಇಲಾಖೆ (ಡಿಎಸಿ) ಹಸಿರು ನಿಶಾನೆ ತೋರಿಸಿದೆ.
ಈ ವರ್ಷದ ಆರಂಭದಲ್ಲಿ ಡೋರ್ನಿಯರ್ ವಿಮಾನದಲ್ಲಿ ತಾಂತ್ರಿಕ ದೋಷಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳ ನಿಖರತೆ ಹಾಗೂ ವಿಶ್ವಾಸರ್ಹತೆಯನ್ನು ಸುಧಾರಣೆಗೊಳಿಸಲು ಡೋರ್ನಿಯರ್ ವಿಮಾನಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಭಾರತೀಯ ವಾಯುಪಡೆ ಮಾಡಿತ್ತು.
ಫಿರಂಗಿ ತೋಪುಗಳು ಹಾಗೂ ರಾಡಾರ್ ಗಳ ತ್ವರಿತ ಜಮಾವಣೆ ಹಾಗೂ ನಿಯೋಜನೆಗಾಗಿ ಹೈಮೊಬಿಲಿಟಿ ವಾಹನಗಳು (ಎಚ್ಎಂವಿ) ಹಾಗೂ ಬಂದೂಕು ಸಾಗಣೆ ವಾಹನಗಳ ಖರೀದಿಗೂ ರಕ್ಷಣಾ ಖರೀದಿ ಮಂಡಳಿ ಅನುಮೋದನೆ ನೀಡಿದೆ.