"ಇದೇ ಹಾವು ಕಚ್ಚಿದ್ದು, ಬೇಗ ಚಿಕಿತ್ಸೆ ನೀಡಿ": ತನಗೆ ಕಚ್ಚಿದ ಹಾವನ್ನೇ ಹಿಡಿದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ವ್ಯಕ್ತಿ!
ಲಖೀಂಪುರ್ (ಉತ್ತರ ಪ್ರದೇಶ): ವಿಷಪೂರಿತ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿಯೊಬ್ಬ, ಅದನ್ನು ಹಿಡಿದುಕೊಂಡು ಗಾಬರಿಯಲ್ಲಿ ಆಸ್ಪತ್ರೆಗೆ ಧಾವಿಸಿರುವ ಘಟನೆ ಉತ್ತರ ಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ನಡೆದಿದೆ. ತನ್ನನ್ನು ಕಚ್ಚಿದ ಹಾವನ್ನು ಪ್ಲಾಸ್ಟಿಕ್ ಡಬ್ಬಿಯೊಂದರಲ್ಲಿ ತುಂಬಿಕೊಂಡು, ತನ್ನೊಂದಿಗೇ ಅದನ್ನೂ ಆಸ್ಪತ್ರೆಗೆ ತಂದಿದ್ದಾನೆ. ಆಸ್ಪತ್ರೆಗೆ ಧಾವಿಸಿದ ನಂತರ, ಪ್ಲಾಸ್ಟಿಕ್ ಡಬ್ಬಿಯಲ್ಲಿದ್ದ ಹಾವನ್ನು “ಇದೇ ಹಾವು ನನಗೆ ಕಚ್ಚಿದೆ. ಬೇಗ ಚಿಕಿತ್ಸೆ ನೀಡಿ” ಎಂದು ವೈದ್ಯರ ಬಳಿ ಮನವಿ ಮಾಡಿದ್ದಾನೆ. ಹಾವನ್ನು ಹಿಡಿದುಕೊಂಡು ಆಸ್ಪತ್ರೆಯ ಹಾಸಿಗೆ ಮೇಲೆ ಕುಳಿತಿರುವ ಆ ವ್ಯಕ್ತಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಹರಿಸ್ವರೂಪ್ ಮಿಶ್ರಾ (40) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿದ್ದ ಜನರು ಆತನನ್ನು ಪಂಡಿತ್ ಜೀ ಎಂದು ಕರೆಯುತ್ತಿರುವುದು ಕಂಡು ಬಂದಿದೆ. ಅವರು ಸಂಪೂರ್ಣ ನಗರ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿದ್ದಾರೆ. ಈ ಘಟನೆಯು ಗುರುವಾರದಂದು ನಡೆದಿದೆ. ಹಾವು ಕಚ್ಚಿದ ನಂತರ, ಆ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುವ ಹರಿಸ್ವರೂಪ್, ಅದನ್ನು ಡಬ್ಬಿಯೊಂದರಲ್ಲಿ ಮುಚ್ಚಿ, ಆಸ್ಪತ್ರೆಗೆ ಜೀವಂತವಾಗಿಯೇ ಕರೆ ತಂದಿದ್ದಾರೆ. ಅವರು ಆಸ್ಪತ್ರೆಗೆ “ಇದೇ ನಾಗರ ಹಾವು ನನ್ನನ್ನು ಕಚ್ಚಿತು. ಬೇಗ ಚಿಕಿತ್ಸೆ ನೀಡಿ” ಎಂದು ಕೂಗುತ್ತಾ ಓಡಿ ಬಂದಿದ್ದಾರೆ ಎಂದು ವರದಿಯಾಗಿದೆ.
ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದವರು ಹರಿಸ್ವರೂಪ್ ರ ಧೈರ್ಯವನ್ನು ಪ್ರಶಂಸಿದ್ದಾರೆ. ಇದಾದ ನಂತರ ಹರಿಸ್ವರೂಪ್ ಹಾವು ಕಚ್ಚಿದ ತನ್ನ ಕೈಯನ್ನು ವೈದ್ಯರಿಗೆ ತೋರಿಸಿ, ಹಾವು ಹೇಗೆ ಕಚ್ಚಿತು ಎಂಬುದನ್ನು ವಿವರಿಸಿದ್ದಾರೆ. ಆಸ್ಪತ್ರೆಯ ಪ್ರಾಧಿಕಾರವು ಈ ಹೇಳಿಕೆಯನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದು, ಸದ್ಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆ ಹಾವನ್ನು ನೋಡಿದ ಕೂಡಲೇ ಯಾವ ವಿಷಪ್ರತಿರೋಧಕವನ್ನು ನೀಡಬೇಕು ಹಾಗೂ ಯಾವ ಚಿಕಿತ್ಸೆಯನ್ನು ನೀಡಬೇಕು ಎಂದು ತಕ್ಷಣವೇ ವೈದ್ಯರಿಗೆ ಅರ್ಥವಾಗಿದೆ. ಆಸ್ಪತ್ರೆಯ ಸಿಬ್ಬಂದಿಗಳು ಹರಿಸ್ವರೂಪ್ ಅವರಿಗೆ ಚುಚ್ಚುಮದ್ದು ನೀಡಲು ತಯಾರಿ ನಡೆಸುತ್ತಿರುವುದು ಆ ವಿಡಿಯೊದಲ್ಲಿ ಸೆರೆಯಾಗಿದೆ. ಸದ್ಯ ಹರಿಸ್ವರೂಪ್ ಶರ್ಮ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಹರಿಸ್ವರೂಪ್ ಅವರ ಮನೆಯೊಳಗೆ ನುಸುಳಿರುವ ಹಾವು, ಅವರ ಕೈಯನ್ನು ಕಚ್ಚಿದೆ. ಕೂಡಲೇ ಬಟ್ಟೆಯೊಂದನ್ನು ತಮ್ಮ ಕೈಸುತ್ತ ಬಿಗಿಯಾಗಿ ಸುತ್ತುಕೊಂಡಿರುವ ಹರಿಸ್ವರೂಪ್, ಆ ಹಾವನ್ನು ಹಿಡಿದು, ಡಬ್ಬಿಯೊಂದರಲ್ಲಿ ತುರುಕುವಲ್ಲಿ ಯಶಸ್ವಿಯಾಗಿದ್ದಾರೆ.