ವಿಶ್ವಸಂಸ್ಥೆ ಮಾನವ ಹಕ್ಕುಗಳ ಅಧಿವೇಶನದಲ್ಲಿ ಮಣಿಪುರ ಮತ್ತು ನೂಹ್ ಹಿಂಸಾಚಾರ ಉಲ್ಲೇಖ
ಹೊಸದಿಲ್ಲಿ: ಸೆಪ್ಟೆಂಬರ್ 11ರಂದು ಹರ್ಯಾಣ ಮತ್ತು ಮಣಿಪುರದಲ್ಲಿನ ಹಿಂಸಾಚಾರವನ್ನು ಪ್ರಸ್ತಾಪಿಸಿರುವ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟುರ್ಕ್, ಎಲ್ಲ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿ ಹಿಡಿಯುವ ಪ್ರಯತ್ನಗಳನ್ನು ಹೆಚ್ಚಿಸಬೇಕು ಎಂದು ಭಾರತಕ್ಕೆ ಕರೆ ನೀಡಿದ್ದಾರೆ ಎಂದು thewire.in ವರದಿ ಮಾಡಿದೆ.
ಸೋಮವಾರ ಪ್ರಾರಂಭವಾದ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ 54ನೇ ಅಧಿವೇಶನದಲ್ಲಿ ಸಹೇಲ್ ಪ್ರಾಂತ್ಯದಿಂದ ಪಾಕಿಸ್ತಾನದವರೆಗೆ, ಭಾರತದಿಂದ ಪೆರುವಿನವರೆಗೆ ಸೇರಿದಂತೆ ಇಡೀ ವಿಶ್ವದಾದ್ಯಂತ ಇರುವ ಮಾನವ ಹಕ್ಕುಗಳ ಪರಿಸ್ಥಿತಿಯ ಕುರಿತು ಟುರ್ಕ್ ಎಂದಿನಂತೆ ಸಾಮಾನ್ಯ ಮೌಖಿಕ ಮಾಹಿತಿಯನ್ನು ನೀಡಿದರು.
ಭಾರತದಲ್ಲಿನ ಪರಿಸ್ಥಿತಿಯ ಕುರಿತು ಮಾತನಾಡಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಮಿಷನರ್, “ಕೆಲ ಸಮುದಾಯಗಳನ್ನು ಹಿಂಸಾಚಾರ ಮತ್ತು ತಾರತಮ್ಯಕ್ಕೆ ಗುರಿಪಡಿಸಲಾಗುತ್ತಿದೆ ಎಂಬ ಮಾಹಿತಿಗಳನ್ನು ಪದೇ ಪದೇ ಸ್ವೀಕರಿಸಲಾಗುತ್ತಿದೆ” ಎಂದು ಹೇಳಿದರು.
“ಇಂತಹ ದಾಳಿಗಳ ಗುರಿ ಪದೇ ಪದೇ ಮುಸ್ಲಿಮರಾಗಿದ್ದು, ತೀರಾ ಇತ್ತೀಚೆಗೆ ಹರಿಯಾಣ, ಗುರುಗ್ರಾಮ ಹಾಗೂ ಈಶಾನ್ಯ ಭಾರತದಲ್ಲಿ ಇಂತಹ ದಾಳಿಗಳು ನಡೆದಿವೆ” ಎಂದು ಅವರು ಉಲ್ಲೇಖಿಸಿದರು.
ಕಳೆದ ತಿಂಗಳು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮೆರವಣಿಗೆಯ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದು, ಹರಿಯಾಣದಾದ್ಯಂತ ಗಲಭೆ ವ್ಯಾಪಿಸಿತ್ತು. ಈ ಹಿಂಸಾಚಾರದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಒಂದು ವಾರ ಕಾಲ ನಡೆದ ಗಲಭೆಯಲ್ಲಿ 200 ಮಂದಿ ಗಾಯಾಳುಗಳಾಗಿದ್ದಾರೆ ಎಂದು ಹೇಳಿದರು.
ನಂತರ, ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಕುರಿತು ಟುರ್ಕ್ ಪ್ರಸ್ತಾಪಿಸಿದರು. “ಮಣಿಪುರದಲ್ಲಿ ಮೇ ತಿಂಗಳಿನಿಂದ ಇತರ ಸಮುದಾಯಗಳೂ ಹಿಂಸಾಚಾರ ಹಾಗೂ ಅಭದ್ರತೆಯನ್ನು ಎದುರಿಸುತ್ತಿವೆ”. ಈ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 70,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.
“ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ಅಸಹಿಷ್ಣುತೆ, ದ್ವೇಷ ಭಾಷಣ, ಧಾರ್ಮಿಕ ಉಗ್ರವಾದ ಹಾಗೂ ತಾರತಮ್ಯವನ್ನು ನ್ಯಾಯೋಚಿತ ರೀತಿಯಲ್ಲಿ ಹತ್ತಿಕ್ಕುವ ಮೂಲಕ ಎತ್ತಿ ಹಿಡಿಯಬೇಕು” ಎಂದು ಅವರು ಭಾರತದ ಕುರಿತ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಪಾಕಿಸ್ತಾನ ಸರ್ಕಾರವು ದೈವನಿಂದನೆ ಕಾನೂನುಗಳಿಗೆ ತಿದ್ದುಪಡಿ ಮಾಡಿ, ದಂಡವನ್ನು ಹೆಚ್ಚಳ ಮಾಡುವ ಕುರಿತು ಕಳವಳ ವ್ಯಕ್ತಪಡಿಸಿದ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಕಮಿಷನರ್, “ಈ ಕಾನೂನಿನ ಮಾರ್ಗವು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಒತ್ತಾಯಿಸಿರುವ ಬದಲಾವಣೆಗಳಿಂದ ದೂರ ಸರಿಯುವ ಪ್ರಮುಖ ಹೆಜ್ಜೆಯಾಗಲಿದೆ” ಎಂದು ಪ್ರತಿಪಾದಿಸಿದರು.
ಫೈಸಲಾಬಾದ್ ನಲ್ಲಿ ಸಾವಿರಾರು ಮಂದಿಯ ಗುಂಪು ಹತ್ತಾರು ಚರ್ಚ್ ಗಳು ಹಾಗೂ ಕ್ರಿಶ್ಚಿಯನ್ ಗೋಪುರಗಳನ್ನು ಧ್ವಂಸಗೊಳಿಸಿರುವ ಕುರಿತೂ ಅವರು ಪ್ರಸ್ತಾಪಿಸಿದರು.