ಮಣಿಪುರ | ಜನಾಂಗೀಯ ಹಿಂಸಾಚಾರದಲ್ಲಿ ಹಾನಿಯಾದ ಸೊತ್ತುಗಳ ಕುರಿತು ವರದಿ ಸಲ್ಲಿಸಿ: ಸುಪ್ರೀಂ ಕೋರ್ಟ್

Update: 2024-12-09 16:25 GMT

ಸುಪ್ರೀಂ ಕೋರ್ಟ್ | PC : PTI  

ಹೊಸದಿಲ್ಲಿ : ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ ಹಾನಿ, ಲೂಟಿ ಅಥವಾ ಅತಿಕ್ರಮಣಕ್ಕೆ ಒಳಗಾದ ಸೊತ್ತುಗಳ ಕುರಿತ ವರದಿಯನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಮಣಿಪುರ ಸರಕಾರಕ್ಕೆ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನು ಒಳಗೊಂಡ ಪೀಠ ಸೊತ್ತುಗಳ ಮಾಲಕರು ಹಾಗೂ ನಿವಾಸಿಗಳ ಹೆಸರು ವಿಳಾಸಗಳನ್ನು ನೀಡುವಂತೆ ಸೂಚಿಸಿದೆ.

‘‘ಅತಿಕ್ರಮಣ ಮಾಡಿದ ವ್ಯಕ್ತಿಗಳ ವಿರುದ್ಧ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ಕೂಡ ಈ ವರದಿಯಲ್ಲಿ ತಿಳಿಸಬೇಕು’’ ಎಂದು ಪೀಠ ಹೇಳಿದೆ. ನ್ಯಾಯಾಲಯ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿದೆ.

ಕಳೆದ ವರ್ಷ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿಯ ಮೇಲ್ವಿಚಾರಣೆ ನೋಡಿಕೊಳ್ಳಲು ಉಚ್ಛ ನ್ಯಾಯಾಲಯದ ಮೂವರು ಮಾಜಿ ಮಹಿಳಾ ನ್ಯಾಯಾಧೀಶರ ಸಮಿತಿಯನ್ನು ರೂಪಿಸುವಂತೆ ಆದೇಶಿಸಿತ್ತು. ಅಲ್ಲದೆ, ಕ್ರಿಮಿನಲ್ ಪ್ರಕರಣಗಳ ತನಿಖೆಯ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಮಹಾರಾಷ್ಟ್ರದ ಮಾಜಿ ಪೊಲೀಸ್ ಮುಖ್ಯಸ್ಥ ದತ್ತಾತ್ರೇಯ ಪಡ್ಸಲ್ಗಿಕಾರ್ ಅವರಿಗೆ ಸೂಚಿಸಿತ್ತು.

ಮಣಿಪುರದಲ್ಲಿ 2023 ಮೇಯಲ್ಲಿ ಆರಂಭವಾದ ಮೈತೈ ಹಾಗೂ ಕುಕಿ-ರೆ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 258 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 59 ಸಾವಿರಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಜನಾಂಗೀಯ ಹಿಂಸಾಚಾರದಲ್ಲಿ 13,264 ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ವಿಧಾನ ಸಭೆಗೆ ತಿಳಿಸಿದ್ದರು.

ಮೈತೈ ಸಮುದಾಯಕ್ಕೆ ಸೇರಿದ ಪುರುಷರ ಗುಂಪೊಂದು ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ನಗ್ನರಾಗಿ ಮೆರವಣಿಗೆ ನಡೆಸಿದ ಹಾಗೂ ಹಲ್ಲೆ ಮಾಡಿದ ವೀಡಿಯೊ ಸಾಮಾಜಿಕ ಮಾದ್ಯಮದಲ್ಲಿ ಹರಿದಾಡಿದ ಬಳಿಕ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅನಂತರ ಸುಪ್ರೀಂ ಕೋರ್ಟ್ ಕಳೆದ ವರ್ಷ ಜುಲೈಯಲ್ಲಿ ಈ ಹಿಂಸಾಚಾರವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News