ಕೇಂದ್ರ ಸರಕಾರದಿಂದ ತಾರತಮ್ಯ ಆರೋಪ: ಮಣಿಪುರದ ಮೂರು ಜಿಲ್ಲೆಗಳಲ್ಲಿ ‘ಸ್ವಯಂ ಆಡಳಿತ’ ಘೋಷಿಸಿದ ಬುಡಕಟ್ಟು ನಾಯಕರ ವೇದಿಕೆ
ಹೊಸದಿಲ್ಲಿ: ಮಣಿಪುರದ ಕುಕಿ- ಝೊ ಸಮುದಾಯದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್)ಯು ಮೂರು ಜಿಲ್ಲೆಗಳಲ್ಲಿ ಸಮುದಾಯದ ಸದಸ್ಯರು ‘ಸ್ವಯಂ ಆಡಳಿತ ’ವನ್ನು ಹೊಂದಿರುತ್ತಾರೆ ಎಂದು ಘೋಷಿಸಿದೆ.
ತೆಂಗನೌಪಾಲ್,ಕಾಂಗ್ಪೊಕ್ಪಿ ಮತ್ತು ಚುರಾಚಂದ್ರಪುರ ಜಿಲ್ಲೆಗಳಲ್ಲಿಯ ಕುಕಿ-ಝೊ ಜನರು ಸ್ವಯಂ ಆಡಳಿತದ ವ್ಯಾಪ್ತಿಗೊಳಪಡುತ್ತಾರೆ ಮತ್ತು ಸಮುದಾಯವು ಮೈತೈ ಮಣಿಪುರ ಸರಕಾರದಿಂದ ಯಾವುದೇ ನಿರೀಕ್ಷೆಯನ್ನು ಹೊಂದಿಲ್ಲ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಐಟಿಎಲ್ಎಫ್ ಪ್ರಧಾನ ಕಾರ್ಯದರ್ಶಿ ಮುವಾನ್ ಟಾಂಬಿಂಗ್ ಅವರು, ‘‘ಕೇಂದ್ರವು ನಮ್ಮನ್ನು ಗುರುತಿಸದಿದ್ದರೂ ನಾವು ಲೆಕ್ಕಿಸುವುದಿಲ್ಲ, ಕಳೆದ ಒಂದು ತಿಂಗಳಿನಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕೇಂದ್ರ ಸರಕಾರದ ‘ಆಯ್ದ ನ್ಯಾಯ’ವು ವೇದಿಕೆಯು ಸ್ವಯಂ ಆಡಳಿತವನ್ನು ಘೋಷಿಸುವಂತೆ ಮಾಡಿದೆ’’ ಎಂದರು.
ತನ್ನ ಬೇಡಿಕೆಗಳು ಎರಡು ವಾರಗಳಲ್ಲಿ ಈಡೇರದಿದ್ದರೆ ಕೇಂದ್ರ ಸರಕಾರವು ಗುರುತಿಸಲಿ ಅಥವಾ ಗುರುತಿಸದಿರಲಿ, ತಾನು ಸ್ವಯಂ ಸರಕಾರವನ್ನು ಸ್ಥಾಪಿಸುವುದಾಗಿ ಐಟಿಎಲ್ಎಫ್ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿದ್ದವು.
ಕುಕಿ-ಝೊ ಸಮುದಾಯವು ಪ್ರತ್ಯೇಕ ಮುಖ್ಯಮಂತ್ರಿಯನ್ನು ಹೊಂದಿರಲಿದೆ,ಇಂಫಾಲ್ನಿಂದ ಅನಿವಾರ್ಯವಾಗಿ ಹೊರಗೆ ತೆರಳಿ ಈಗ ಮರಳಲು ಸಾಧ್ಯವಾಗದಿರುವ ಸಮುದಾಯದ ಅಧಿಕಾರಿಗಳಿಗೆ ಹೊಣೆಗಾರಿಕೆಗಳನ್ನು ವಹಿಸಲಾಗುವುದು ಎಂದು ಟಾಂಬಿಂಗ್ ತಿಳಿಸಿದರು. ಇಂಫಾಲ್ ನಲ್ಲಿ ಮೈತೈ ಸಮುದಾಯವು ಬಹುಸಂಖ್ಯಾತವಾಗಿದೆ.
ಕಳೆದ ತಿಂಗಳು ಸಂಸತ್ ನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕುಕಿ-ಝೊ ಜನರನ್ನು ‘ಹೊರಗಿನವರು ’ಎಂದು ಉಲ್ಲೇಖಿಸಿದ್ದರು ಎಂದೂ ಟಾಂಬಿಂಗ್ ಬೆಟ್ಟು ಮಾಡಿದರು.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವು ಭುಗಿಲೆದ್ದಿದ್ದ ಮೇ 3ರಿಂದಲೂ ಐಟಿಎಲ್ಎಫ್ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಜೊತೆ ಹಲವಾರು ಸುತ್ತುಗಳ ಮಾತುಕತೆ ನಡೆಸಿದೆಯಾದರೂ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ.