ಮಹಾರಾಷ್ಟ್ರ: ಮರಾಠಾ ಮೀಸಲಾತಿ ಹೋರಾಟಗಾರ ಆತ್ಮಹತ್ಯೆ
ಮುಂಬೈ: ಮರಾಠಾ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ 45 ವರ್ಷದ ವ್ಯಕ್ತಿಯೋರ್ವ ಮುಂಬೈಯ ಬಾಂದ್ರಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಗುರುವಾರ ತಿಳಿಸಿದ್ದಾರೆ.
ಜಲ್ನಾ ಜಿಲ್ಲೆಯ ಅಂಬಾಡ್ ತೆಹ್ಸಿಲ್ನ ಚಿಕನ್ಗಾಂವ್ ನ ನಿವಾಸಿ ಸುನೀಲ್ ಕವಾಲೆ ಅವರ ಮೃತದೇಹ ಮಹಾನಗರದ ಪಶ್ಚಿಮ ಭಾಗದ ಬಾಂದ್ರಾ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಡುವಿನ ಫ್ಲೈ ಓವರ್ನ 4ನೇ ಸಂಖ್ಯೆಯ ಕಂಬದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬುಧವಾರ ರಾತ್ರಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತದೇಹದ ಸಮೀಪ ಸುಸೈಡ್ ನೋಟ್ ಪತ್ತೆಯಾಗಿದೆ. ಮರಾಠಾ ಮೀಸಲಾತಿಯ ಕಾರಣಕ್ಕಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಕವಾಲೆ ಸುಸೈಡ್ ನೋಟ್ ನಲ್ಲಿ ಹೇಳಿದ್ದಾನೆ. ಆತ ಧರಿಸಿರುವ ಬಿಳಿ ಅಂಗಿಯಲ್ಲಿ ಕೂಡ ಮೀಸಲಾತಿ ಆಗ್ರಹದ ಸಂದೇಶ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಕವಾಲೆ ಮರಾಠಾ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸುತ್ತಿರುವ ಮರಾಠಾ ಕ್ರಾಂತಿ ಮೋರ್ಚಾದ ಸಕ್ರಿಯ ಸದಸ್ಯ. ಮರಾಠಾ ಮೀಸಲಾತಿಗೆ ಆಗ್ರಹಿಸಿ ಆಯೋಜಿಸಲಾಗಿದ್ದ ಎಲ್ಲಾ 58 ರ್ಯಾಲಿಗಳಲ್ಲಿ ಕವಾಲೆ ಪಾಲ್ಗೊಂಡಿದ್ದ’’ ಎಂದು ಅವರು ತಿಳಿಸಿದ್ದಾರೆ.