ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ವಿವಾದ | ಜಲ್ನದ ಅಂಬದ್ ನಲ್ಲಿ ಕರ್ಫ್ಯೂ ಹೇರಿಕೆ

Update: 2024-02-26 15:56 GMT

ಮನೋಜ್ ಜಾರಂಗೆ ಪಾಟೀಲ್ | Photo: thehindu.com

ಮುಂಬೈ: ಮರಾಠಾ ಸಮುದಾಯಕ್ಕೆ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಮನೋಜ್ ಜಾರಂಗೆ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಜಲ್ನ ಜಿಲ್ಲೆಯ ಅಂಬದ್ ತಾಲೂಕಿನಲ್ಲಿ ಸೋಮವಾರ ಕರ್ಫ್ಯೂ ಹೇರಲಾಗಿದೆ.

ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಾನು ಮುಂಬೈಗೆ ಹೋಗುತ್ತೇನೆ ಎಂಬುದಾಗಿ ಜಾರಂಗೆ ಪಾಟೀಲ್ ರವಿವಾರ ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಮರಾಠಾ ಹೋರಾಟಗಾರ ಜಾರಂಗೆ ಪಾಟೀಲ್ ಜಲ್ನದ ಅಂತರ್ವಾಲಿ ಸಾರಟಿ ಗ್ರಾಮದಲ್ಲಿ ಉಪವಾಸ ಮುಷ್ಕರ ನಡೆಸುತ್ತಿದ್ದಾರೆ.

ಉಪವಾಸ ಸತ್ಯಾಗ್ರಹದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ, ಧುಲೆ-ಮುಂಬೈ ಹೆದ್ದಾರಿ ಮತ್ತು ಸಮೀಪದ ಇತರ ಪ್ರದೇಶಗಳಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಜಲ್ನ ಜಿಲ್ಲಾಧಿಕಾರಿ ಶ್ರೀಕೃಷ್ಣ ಪಾಂಚಾಲ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

‘‘ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಂಬದ್ ತಾಲೂಕಿನಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಮುಂದಿನ ಆದೇಶದವರೆಗೆ ಕರ್ಫ್ಯೂ ವಿಧಿಸಲಾಗಿದೆ’’ ಎಂದು ಅವರು ಹೇಳಿದರು.

ಕರ್ಫ್ಯೂ ಇರುವ ಸ್ಥಳಗಳಲ್ಲಿ ಜನರು ಸಾರ್ವಜನಿಕ ಸ್ಥಳಗಳಿಗೆ ಹೋಗುವಂತಿಲ್ಲ. ಸೋಮವಾರ ಪ್ರತಿಭಟನಕಾರರು ಅಂಬದ್ ತಾಲೂಕಿನ ತೀರ್ಥಪುರಿ ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವುದಕ್ಕಾಗಿ ರಾಜ್ಯ ಸರಕಾರವು ಜಲ್ನ, ಛತ್ರಪತಿ ಸಾಂಬಾಜಿನಗರ ಮತ್ತು ಬೀಡ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಮಹಾರಾಷ್ಟ್ರ ಸರಕಾರವು ನನ್ನನ್ನು ಪ್ರಕರಣವೊಂದರಲ್ಲಿ ಸಿಲುಕಿಸಿ ಬಂಧಿಸಲು ಯತ್ನಿಸುತ್ತಿದೆ ಎಂಬುದಾಗಿಯೂ ರವಿವಾರ ಜಾರಂಗೆ ಪಾಟೀಲ್ ಹೇಳಿದ್ದರು.

‘‘ನಾನು ದ್ರಾವಣ ಕುಡಿದು ಬದುಕುತ್ತಿದ್ದೇನೆ. ನನ್ನ ಎದೆ ನೋಯುತ್ತಿದೆ. ಆದರೆ, ಸರಕಾರ ಇನ್ನೂ ಇಲ್ಲಿಗೆ ಬಂದಿಲ್ಲ. ಅವರು ನೆವಗಳನ್ನು ಹೇಳುತ್ತಿದ್ದಾರೆ. ಅವರು ಇಲ್ಲಿಗೆ ಬಂದರೆ ನಾವು ಅವರನ್ನು ಸ್ವಾಗತಿಸುತ್ತೇವೆ. ಆದರೆ, ಸರಕಾರ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಕಾಣುತ್ತದೆ. ಅದು ಮರಾಠಾ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ’’ ಎಂದು ಅವರು ಹೇಳಿದರು.

ಮರಾಠಾ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 10 ಶೇಕಡ ಮೀಸಲಾತಿ ನೀಡುವ ಉದ್ದೇಶದ ಮಸೂದೆಯೊಂದನ್ನು ಮಹಾರಾಷ್ಟ್ರ ಶಾಸಕಾಂಗವು ಫೆಬ್ರವರಿ 20ರಂದು ಅನುಮೋದಿಸಿತ್ತು.

ಆದರೆ, ಈ ಮೀಸಲಾತಿಯು ರಾಜ್ಯದಲ್ಲಿ ಈಗಾಗಲೇ ಇರುವ 62 ಶೇಕಡ ಮೀಸಲಾತಿಗೆ ಹೆಚ್ಚುವರಿಯಾಗಿದೆ. ಈ 62 ಶೇಕಡ ಮೀಸಲಾತಿಯಲ್ಲಿ ಆರ್ಥಿಕ ದುರ್ಬಲ ವರ್ಗಗಳಿಗೆ ನೀಡುವ 10 ಶೇಕಡ ಮೀಸಲಾತಿಯೂ ಸೇರಿದೆ.

2018ರಲ್ಲಿ ಅಂದಿನ ಬಿಜೆಪಿ-ಶಿವಸೇನಾ ಸರಕಾರವು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಅಡಿಯಲ್ಲಿ ಮರಾಠರಿಗೆ 16 ಶೇಕಡ ಮೀಸಲಾತಿ ನೀಡುವ ನಿರ್ಣಯವನ್ನು ಅಂಗೀಕರಿಸಿತ್ತು. ಆದರೆ, 2021ರಲ್ಲಿ ಅದನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಒಟ್ಟು ಮೀಸಲಾತಿ 1992ರಲ್ಲಿ ನಿಗದಿಪಡಿಸಿರುವಂತೆ 50 ಶೇಕಡವನ್ನು ಮೀರಬಾರದು ಎಂದು ನ್ಯಾಯಾಲಯ ಹೇಳಿತ್ತು.

ಹಾಗಾಗಿ, ಮರಾಠ ಸಮುದಾಯಕ್ಕೆ ಒಬಿಸಿ ವಿಭಾಗದಲ್ಲಿ ಮೀಸಲಾತಿ ನೀಡಬೇಕು ಎಂಬುದಾಗಿ ಜಾರಂಗೆ ಪಾಟೀಲ್ ಒತ್ತಾಯಿಸಿದ್ದಾರೆ. ಯಾಕೆಂದರೆ, ಹೆಚ್ಚುವರಿ ಮೀಸಲಾತಿಯು 50 ಶೇಕಡ ಸಾಂವಿಧಾನಿಕ ಮಿತಿಯನ್ನು ಮೀರುತ್ತದೆ ಹಾಗೂ ಬಳಿಕ ಅದನ್ನು ನ್ಯಾಯಾಂಗವು ರದ್ದುಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಜಾರಂಗೆ ಸರಕಾರದ ತಾಳ್ಮೆಯನ್ನು ಪರೀಕ್ಷಿಸಬಾರದು: ಏಕನಾಥ ಶಿಂದೆ

ರವಿವಾರ ಜಾರಂಗೆಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಜಾರಂಗೆ ಪಾಟೀಲ್ ಸರಕಾರದ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು ಹೇಳಿದ್ದಾರೆ.

‘‘ಸರಕಾರದ ವಿರುದ್ಧ ಪದೇ ಪದೇ ಪ್ರತಿಭಟನೆಗಳನ್ನು ನಡೆಸುತ್ತಿರುವವರು ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಅವರು ಕಾನೂನು ಮತ್ತು ವ್ಯವಸ್ಥೆ ಬಿಕ್ಕಟ್ಟನ್ನು ಸೃಷ್ಟಿಸಬಾರದು. ಜಾರಂಗೆಯ ಮಾತುಗಳು ಸಾಮಾನ್ಯವಾಗಿ (ಪ್ರತಿಪಕ್ಷ ನಾಯಕರಾದ) ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಬಳಸುವ ಹಸ್ತಪ್ರತಿಗಳಲ್ಲಿರುವ ಬರಹದಂತೆ ಯಾಕೆ ಕಾಣಿಸುತ್ತವೆ ಎಂದು ನನಗೆ ಅರ್ಥವಾಗುವುದಿಲ್ಲ’’ ಎಂದು ಶಿಂದೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News