ಭಾರಿ ಪ್ರಮಾಣದ ಅಂತರರಾಷ್ಟ್ರೀಯ ಪೊಲೀಸ್ ಕಾರ್ಯಾಚರಣೆ | ರ‍್ಯಾನ್ಸಮ್ ವೇರ್ ಜಾಲಕ್ಕೆ ಕತ್ತರಿ ; 4 ಮಂದಿ ಶಂಕಿತರ ಬಂಧನ
ಲಂಡನ್: ಯೂರೋಪಿಯನ್ ನ್ಯಾಯಾಂಗದ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿರುವ ಪೊಲೀಸ್ ಸಂಸ್ಥೆಗಳು ಇಮೇಲ್ ಗಳ ಮೂಲಕ ರ‍್ಯಾನ್ಸಮ್ ವೇರ್ ಅನ್ನು ಹರಡುತ್ತಿದ್ದ ಕಂಪ್ಯೂಟರ್ ಜಾಲಗಳನ್ನು ಹೆಡೆಮುರಿಕಟ್ಟಿದ್ದಾರೆ. ಆ ಮೂಲಕ ಇಂತಹ ಆಮಿಷಕಾರಿ ಸೈಬರ್ ಅಪರಾಧದ ಮೇಲೆ ಬಹುದೊಡ್ಡ ಅಂತರರಾಷ್ಟ್ರೀಯ ಕಾರ್ಯಾಚರಣೆ ನಡೆಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.
ಯೂರೋಪ್ ಒಕ್ಕೂಟ ನ್ಯಾಯಾಂಗ ಸಹಕಾರ ಸಂಸ್ಥೆ ಯೂರೋಜಸ್ಟ್ ಪ್ರಕಾರ, ಗುರುವಾರ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದು, 100ಕ್ಕೂ ಹೆಚ್ಚು ಸರ್ವರ್ ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ 2,000 ಅಂತರ್ಜಾಲ ತಾಣಗಳ ನಿಯಂತ್ರಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಎಂಡ್ ಗೇಮ್ ಎಂಬ ಗುಪ್ತನಾಮದೊಂದಿಗೆ ಈ ವಾರ ನಡೆದ ಈ ಬೃಹತ್ ಕಾರ್ಯಾಚರಣೆಯನ್ನು ಜರ್ಮನಿ, ನೆದರ್ ಲೆಂಡ್ಸ್, ಫ್ರಾನ್ಸ್, ಡೆನ್ಮಾರ್ಕ್, ಉಕ್ರೇನ್, ಅಮೆರಿಕಾ ಹಾಗೂ ಬ್ರಿಟನ್ ಸಮನ್ವಯದೊಂದಿಗೆ ನಡೆಸಲಾಯಿತು ಎಂದು ಯೂರೋಜಸ್ಟ್ ಹೇಳಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ಶಂಕಿತರನ್ನು ಉಕ್ರೇನ್ ನಿಂದ ಹಾಗೂ ಓರ್ವ ಶಂಕಿತನನ್ನು ಅರ್ಮೇನಿಯಾದಿಂದ ಬಂಧಿಸಲಾಗಿದೆ ಎಂದೂ ಯೂರೋಪ್ ಒಕ್ಕೂಟದ ಪೊಲೀಸ್ ಸಂಸ್ಥೆ ಯೂರೊಪೋಲ್ ಹೇಳಿದೆ
ಸಮಸ್ಯೆಯುಂಟು ಮಾಡುತ್ತಿರುವ ಮಾಲ್ವೇರ್ ಹಾಗೂ ರ‍್ಯಾನ್ಸಮ್ ವೇರ್ ಅನ್ನು ಗುರಿಯಾಗಿಸಿಕೊಂಡು ನಡೆದಿರುವ ಇತ್ತೀಚಿನ ಕಾರ್ಯಾಚರಣೆ ಇದಾಗಿದೆ. 2021ರಲ್ಲಿ ಎಮೊಟೆಟ್ ಎಂಬ ಬಾಟ್ ನೆಟ್ ಅನ್ನು ಜಾಲವನ್ನು ಪತ್ತೆ ಹಚ್ಚಿದ ನಂತರ, ಇದು ದೊಡ್ಡ ಪ್ರಮಾಣದ ಕಾರ್ಯಾಚರಣೆಯಾಗಿದೆ ಎಂದು ಯೂರೊಜಸ್ಟ್ ಹೇಳಿದೆ. ದುರುದ್ದೇಶಪೂರಿತ ಚಟುವಟಿಕೆಗಳಿಗಾಗಿಯೇ ಕಂಪ್ಯೂಟರ್ ಗಳನ್ನು ಹೈಜಾಕ್ ಮಾಡುವ ಜಾಲವನ್ನು ಬಾಟ್ ನೆಟ್ ಎಂದು ಕರೆಯಲಾಗುತ್ತದೆ.