ಲಡಾಖ್ ಗೆ ರಾಜ್ಯದ ಸ್ಥಾನಮಾನ ಆಗ್ರಹಿಸಿ ಲೇಹ್ ನಲ್ಲಿ ಬೃಹತ್ ರ‍್ಯಾಲಿ

Update: 2024-02-04 16:25 GMT

Photo: NDTV 

ಹೊಸದಿಲ್ಲಿ: ಕೇಂದ್ರಾಡಳಿತ ಪ್ರದೇಶ ಲಡಾಖ್‌ ಗೆ ರಾಜ್ಯದ ಸ್ಥಾನಮಾನ ಹಾಗೂ ಸಂವಿಧಾನದ ಆರನೇ ಶೆಡ್ಯೂಲ್ನಡಿ ಸಾಂವಿಧಾನಿಕ ರಕ್ಷಣೆಗೆ ಆಗ್ರಹಿಸಿ ರವಿವಾರ ಲೇಹ್ನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.

ಲೇಹ್ ಅಪೆಕ್ಸ್ ಬಾಡಿ (ಎಲ್ಎಬಿ) ಹಾಗೂ ಕಾರ್ಗಿಲ್ ಡೆಮಾಕ್ರಾಟಿಕ್ ಅಲಯನ್ಸ್ (ಕೆಡಿಎ) ಈ ಪ್ರತಿಭಟನೆಯನ್ನು ಜಂಟಿಯಾಗಿ ಆಯೋಜಿಸಿದ್ದವು. ಲಡಾಖ್‌ ನ ಮುಖ್ಯ ನಗರವಾದ ಲೇಹ್ನಲ್ಲಿ ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಪುರುಷರು ಹಾಗೂ ಮಹಿಳೆಯರು ರ‍್ಯಾಲಿಯಲ್ಲಿ ಪಾಲ್ಗೊಂಡರು. ರ‍್ಯಾಲಿಗೆ ಬೆಂಬಲ ವ್ಯಕ್ತಪಡಿಸಿ ಅಂಗಡಿಮುಂಗಟ್ಟೆಗಳು ಮುಚ್ಚಿದ್ದವು.

ಲಡಾಖ್‌ ಗೆ ರಾಜ್ಯದ ಸ್ಥಾನಮಾನ, ಸ್ಥಳೀಯರಿಗೆ ಜಮೀನು, ಉದ್ಯೋಗದ ಭದ್ರತೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಆನಂತರ ಅದು ಶಾಸನಸಭೆಯಿಂದ ವಂಚಿತವಾಗಿದೆ ಹಾಗೂ ದೀರ್ಘಾವಧಿಯಿಂದ ಅಧಿಕಾರಶಾಹಿಯ ಆಳ್ವಿಕೆಗೆ ಒಳಗಾಗಿದೆಯೆಂದು ಲಡಾಖ್‌ ನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು. ಲಡಾಖ್‌ ಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ದೊರೆತಲ್ಲಿ ಮಾತ್ರವೇ ಈ ಪ್ರದೇಶದ ಆಡಳಿತ ನಡೆಸುವುದಕ್ಕಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವಕಾಶ ದೊರೆಯುತ್ತದೆ ಹಾಗೂ ಅವರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಲಡಾಖ್‌ ನ ವಿದ್ಯಾರ್ಥಿಗಳಿಗೆ ಗೆಜೆಟೆಡ್ ಹುದ್ದೆಗಳನ್ನು ಪಡೆಯಲು ಸೀಮಿತ ಅವಕಾಶಗಳಿರುವುದರಿಂದ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಲಡಾಖ್ ಲೋಕಸೇವಾ ಆಯೋಗವನ್ನು ಸ್ಥಾಪಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಲಡಾಖ್‌ ಗೆ ವಿಧಾನಸಭಾ ಪ್ರಾತಿನಿಧ್ಯವಿಲ್ಲದೆ ಇರುವುದರಿಂದ ಜನಕೇಂದ್ರಿತ ಅಧಿಕಾರಗಳು ದುರ್ಬಲಗೊಂಡಿವೆ ಎಂದು ಕಾರ್ಗಿಲ್ ಡೆಮಾಕ್ರಾಟಿಕ್ ಅಲಾಯನ್ಸ್ ಪಕ್ಷದ ಕಾನೂನು ಸಲಹೆಗಾರ ಹಾಜಿ ಗುಲಾಂ ಮುಸ್ತಾಫಾ ಆಪಾದಿಸಿದ್ದಾರೆ.

ಸಂವಿಧಾನದ 370ನೇ ವಿಧಿ ಹಾಗೂ 35ಎ ರದ್ದತಿಯ ಬಳಿಕ ಜಮ್ಮುಕಾಶ್ಮೀರದಿಂದ ಪ್ರತ್ಯೇಕಗೊಂಡ ಲಡಾಖ್ , ಶಾಸನಸಭೆಯನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಾಗಿ ಮಾರ್ಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News