ಐದನೇ ಟಿ20 ಶತಕ ಸಿಡಿಸಿ ರೋಹಿತ್ ದಾಖಲೆ ಸರಿಗಟ್ಟಿದ ಮ್ಯಾಕ್ಸ್‌ ವೆಲ್‌

Update: 2024-02-11 16:21 GMT

ಮ್ಯಾಕ್ಸ್‌ ವೆಲ್‌ | Photo: NDTV 

ಅಡಿಲೇಡ್: ಆಸ್ಟ್ರೇಲಿಯದ ಬಿಗ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್‌ ವೆಲ್‌ 50 ಎಸೆತಗಳಲ್ಲಿ 5ನೇ ಬಾರಿ ಟಿ20 ಶತಕವನ್ನು ಸಿಡಿಸುವ ಮೂಲಕ ಭಾರತದ ನಾಯಕ ರೋಹಿತ್ ಶರ್ಮಾರ ದಾಖಲೆಯನ್ನು ಸರಿಗಟ್ಟಿದ್ದಾರೆ. ರವಿವಾರ ನಡೆದ ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಟಿ20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಮ್ಯಾಕ್ಸ್‌ ವೆಲ್‌ ಈ ಸಾಧನೆ ಮಾಡಿದ್ದಾರೆ.

3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಆಸ್ಟ್ರೇಲಿಯ 2ನೇ ಟಿ20ಯಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿದು 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದೆ.

ಆತಿಥೇಯ ತಂಡ 7ನೇ ಓವರ್ನಲ್ಲಿ 64 ರನ್‌ ಗೆ 3 ವಿಕೆಟ್‌ ಗಳನ್ನು ಕಳೆದುಕೊಂಡಿತ್ತು. ಆಗ ಮೈದಾನಕ್ಕೆ ಪ್ರವೇಶಿಸಿದ 35ರ ಹರೆಯದ ಮ್ಯಾಕ್ಸ್‌ ವೆಲ್‌ ತನ್ನ ಪ್ರಚಂಡ ಫಾರ್ಮ್ ಪ್ರದರ್ಶಿಸಿದರು. ತನ್ನ ಅಮೋಘ ಇನಿಂಗ್ಸ್ ನಲ್ಲಿ 8 ಸಿಕ್ಸರ್ ಹಾಗೂ 12 ಬೌಂಡರಿ ಬಾರಿಸಿದರು. ಕೇವಲ 55 ಎಸೆತಗಳಲ್ಲಿ ಔಟಾಗದೆ 120 ರನ್ ಗಳಿಸಿದರು.

ಟಿ20ಯಲ್ಲಿ 5ನೇ ಶತಕವನ್ನು ಪೂರೈಸಿದ ಮ್ಯಾಕ್ಸ್‌ ವೆಲ್‌, ಮಾರ್ಕಸ್ ಸ್ಟೋನಿಸ್(16 ರನ್)ಅವರೊಂದಿಗೆ 82 ರನ್ ಹಾಗೂ ಇನ್ನೋರ್ವ ಬಿಗ್ ಹಿಟ್ಟರ್ ಟಿಮ್ ಡೇವಿಡ್(31 ರನ್, 14 ಎಸೆತ)ಅವರೊಂದಿಗೆ 95 ರನ್ ಜೊತೆಯಾಟದಲ್ಲಿ ಭಾಗಿಯಾದರು.

ಮ್ಯಾಕ್ಸ್‌ ವೆಲ್‌ 102 ಟಿ20 ಪಂದ್ಯಗಳಲ್ಲಿ 30.83ರ ಸರಾಸರಿಯಲ್ಲಿ 155.26ರ ಸ್ಟ್ರೈಕ್ರೇಟ್‌ ನಲ್ಲಿ 5 ಶತಕ ಹಾಗೂ 10 ಅರ್ಧಶತಕಗಳ ಸಹಿತ ಒಟ್ಟು 2,405 ರನ್ ಗಳಿಸಿದ್ದಾರೆ.

ಮತ್ತೊಂದೆಡೆ ರೋಹಿತ್ 151 ಟಿ20 ಪಂದ್ಯಗಳಲ್ಲಿ 31.79ರ ಸರಾಸರಿ ಹಾಗೂ 139.97ರ ಸ್ಟ್ರೈಕ್ರೇಟ್‌ ನಲ್ಲಿ ಐದು ಶತಕಗಳನ್ನು ಗಳಿಸಿದ್ದಾರೆ. ಭಾರತದ ನಾಯಕ ಟಿ20 ವೃತ್ತಿಜೀವನದಲ್ಲಿ 29 ಅರ್ಧಶತಕಗಳನ್ನು ಕೂಡ ಗಳಿಸಿದ್ದಾರೆ.

ಗರಿಷ್ಠ ಟಿ20 ಶತಕ ಗಳಿಸಿದವರ ಪಟ್ಟಿಯಲ್ಲಿ ಸೂರ್ಯಕುಮಾರ್ ಸದ್ಯ 2ನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ 60 ಪಂದ್ಯಗಳಲ್ಲಿ 4 ಶತಕಗಳನ್ನು ಗಳಿಸಿದ್ದಾರೆ.

ಗರಿಷ್ಠ ಟಿ20 ಶತಕ ಗಳಿಸಿದ ಬ್ಯಾಟರ್ಗಳು

ಗ್ಲೆನ್ ಮ್ಯಾಕ್ಸ್‌ ವೆಲ್‌(ಆಸ್ಟ್ರೇಲಿಯ)-5

ರೋಹಿತ್ ಶರ್ಮಾ(ಭಾರತ)-5

ಸೂರ್ಯಕುಮಾರ್ ಯಾದವ್(ಭಾರತ)-4

ಸಬಾವೂನ್ ಡವಿಝಿ(ಝೆಕ್ ಗಣರಾಜ್ಯ)-3

ಕೊಲಿನ್ ಮುನ್ರೊ(ನ್ಯೂಝಿಲ್ಯಾಂಡ್)-3

ಬಾಬರ್ ಆಝಮ್(ಪಾಕಿಸ್ತಾನ)-3

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News